Wednesday, October 8, 2025
Google search engine

Homeಅಪರಾಧಕೋಲಾರದಲ್ಲಿ ಮದುವೆ ಮುಗಿಸಿ ಹೋಗುತ್ತಿದ್ದ ಬಸ್ ಪಲ್ಟಿ: 30ಕ್ಕೂ ಹೆಚ್ಚು ಮಂದಿ ಗಾಯ

ಕೋಲಾರದಲ್ಲಿ ಮದುವೆ ಮುಗಿಸಿ ಹೋಗುತ್ತಿದ್ದ ಬಸ್ ಪಲ್ಟಿ: 30ಕ್ಕೂ ಹೆಚ್ಚು ಮಂದಿ ಗಾಯ

ಕೋಲಾರದ ತಾಲೂಕು ಸುಗಟೂರು ಗ್ರಾಮದಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ್ದು, ಪರಿಣಾಮ 30ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಡೆದಿದೆ.

ಕೋಲಾರದ ವಧು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವರನ ಮದುವೆ ಆರತಕ್ಷತೆ ಕಾರ್ಯಕ್ರಮ ಕೋಲಾರ ಹೊರವಲಯದ ರತ್ನ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಹೀಗಾಗಿ ಮೂರು ಖಾಸಗಿ ಬಸ್ ಮೂಲಕ ವರನ ಕಡೆಯವರು ಆಗಮಿಸಿದ್ದರು.

ಆರತಕ್ಷತೆ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಗ್ರಾಮಕ್ಕೆ ಹೋಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಾಲುವೆಗೆ ಉರುಳಿದೆ. ಬಸ್‌ನಲ್ಲಿ ಸುಮಾರು 55 ಜನರಿದ್ದು, ಆ ಪೈಕಿ 30 ಜನರಿಗೆ ಗಾಯಗಳಾಗಿದೆ ಎನ್ನಲಾಗಿದೆ.

ಇನ್ನು 10 ಜನರಿಗೆ ಗಂಭೀರ ಗಾಯಗೊಂಡಿದ್ದು, ಗಾಯಗೊಂಡವರ ಪೈಕಿ 15 ಜನ ಮಹಿಳೆಯರು ಎಂದು ತಿಳಿದು ಬಂದಿದೆ. ಆರತಕ್ಷತೆ ಮುಗಿಸಿ ವಾಪಸ್ ಆಗುವ ವೇಳೆ ಏಕಾಏಕಿ ಬಸ್ ಕಾಲುವೆಗೆ ಉರುಳಿದ್ದು, ಬಸ್ ನಲ್ಲಿದ್ದ ಜನರೆಲ್ಲರೂ ಬಹುತೇಕ ನೀರಿಗೆ ಬಿದ್ದಿದ್ದಾರೆ.

ಬಸ್ ಕಾಲುವೆಗೆ ಉರುಳುತ್ತಿದ್ದಂತೆ ಪ್ರಯಾಣಿಕರು ಕಿರುಚಾಡಿದ್ದಾರೆ. ಇದನ್ನೂ ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ  ಜನರನ್ನು ರಕ್ಷಣೆ ಮಾಡಿ ಕೂಡಲೇ ಗಾಯಳುಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಕ್ರೇನ್ ಮೂಲಕ ಬಸ್ ಅನ್ನು ಮೇಲಕ್ಕೆ ಎತ್ತಲಾಗಿದೆ.

RELATED ARTICLES
- Advertisment -
Google search engine

Most Popular