ಚಿತ್ರದುರ್ಗ: ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಬಸ್ ಪಲ್ಟಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ೨೫ ಮಂದಿಗೆ ಗಾಯಗಳಾಗಿದ್ದು, ೮ ಜನರ ಸ್ಥಿತಿ ಚಿಂತಾಜನಕವಾಗಿದೆ.
ಸೀಬರ್ಡ್ ಎಂಬ ಖಾಸಗಿ ಸಂಸ್ಥೆ ಬಸ್ ಪ್ರಯಾಣಿಕರನ್ನು ತುಂಬಿಸಿಕೊಂಡು ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿತ್ತು ಬಸ್ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಬಳಿಯ ಕಣಿವೆ ಆಂಜನೇಯ ದೇಗುಲದ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿದೆ, ಅತಿವೇಗವಾಗಿ ಹೋಗುತ್ತಿದ್ದ ಬಸ್ ಪಲ್ಟಿ ಹೊಡೆದಿದ್ರಿಂದ ಈ ದುರಂತ ನಡೆದಿದೆ. ೨೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಇದರಲ್ಲಿ ೮ ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ರಸ್ತೆ ಸರಿಯಾಗಿಲ್ಲ, ರಸ್ತೆಯ ಅವೈಜ್ಞಾನಿಕ ನಿರ್ಮಾಣವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.