Tuesday, July 14, 2026
Google search engine

Homeರಾಜ್ಯಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ; ಕರಾವಳಿ ಅಭಿವೃದ್ಧಿಗೆ ಮಹತ್ವದ ಯೋಜನೆಗಳ ಚರ್ಚೆ...

ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ; ಕರಾವಳಿ ಅಭಿವೃದ್ಧಿಗೆ ಮಹತ್ವದ ಯೋಜನೆಗಳ ಚರ್ಚೆ ಸಾಧ್ಯತೆ !

ಬೆಂಗಳೂರು/ಮಂಗಳೂರು : ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಜುಲೈ 29ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದ್ದು, ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳು ಈ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರವಾಸೋದ್ಯಮ, ಮೂಲಸೌಕರ್ಯ, ಕಾನೂನು ಸುವ್ಯವಸ್ಥೆ, ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ, ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ಸೇರಿದಂತೆ ಹಲವು ಪ್ರಮುಖ ವಿಷಯಗಳು ಸಚಿವ ಸಂಪುಟ ಸಭೆಯ ಅಜೆಂಡಾದಲ್ಲಿವೆ.

ಇನ್ನೂ ಈ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಲು ಉದ್ದೇಶಿಸಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡಿರುವ ವಿಶೇಷ ವ್ಯವಸ್ಥೆಯ ಮಾದರಿಯಲ್ಲಿ ಕರಾವಳಿ ಕರ್ನಾಟಕದ ಅಭಿವೃದ್ಧಿಗೂ ಪ್ರತ್ಯೇಕ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮುಂದುವರೆದು, ಕರಾವಳಿ ಕರ್ನಾಟಕ ಹಲವು ಅಭಿವೃದ್ಧಿ ಸೂಚ್ಯಂಕಗಳಲ್ಲಿ ಮುಂದಿದ್ದರೂ, ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಇನ್ನಷ್ಟು ಹೂಡಿಕೆ ಅಗತ್ಯವಿದೆ. ಉತ್ತಮ ರಸ್ತೆ ಸಂಪರ್ಕ ಮತ್ತು ಅಗತ್ಯ ಭೂಸ್ವಾಧೀನ ಕ್ರಮಗಳನ್ನು ಕೈಗೊಂಡರೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಖಾದರ್ ಹೇಳಿದ್ದಾರೆ.

ಇದೇ ವೇಳೆ ಪುತ್ತೂರು ಶಾಸಕ ಅಶೋಕ್ ರೈ ಅವರು ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದರಿಂದ ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿ ಸ್ಪರ್ಧಾತ್ಮಕ ಹಾಗೂ ಸರ್ಕಾರಿ ಪರೀಕ್ಷೆಗಳನ್ನು ಬರೆಯಲು ಅವಕಾಶ ದೊರೆಯಲಿದೆ ಎಂದು ಹೇಳಿದ್ದಾರೆ.

ಮಂಗಳೂರಿನ ಮಂಗಲಾ ಕಾರ್ನಿಷ್ ರಸ್ತೆಯನ್ನು 10 ಕಿಲೋಮೀಟರ್ ಉದ್ದದಲ್ಲಿ 100 ಅಡಿ ಅಗಲಕ್ಕೆ ವಿಸ್ತರಿಸುವ ಸುಮಾರು ₹1,000 ಕೋಟಿ ವೆಚ್ಚದ ಯೋಜನೆಯ ಡಿಪಿಆರ್ ಸಿದ್ಧವಾಗಿದೆ. ಸರ್ಕಾರ ಅನುಮೋದನೆ ನೀಡಿದರೆ ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಶೋಕ್ ರೈ ತಿಳಿಸಿದ್ದಾರೆ.

ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ರಾಜ್ಯ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವವೂ ಸಭೆಯಲ್ಲಿ ಚರ್ಚೆಗೆ ಬರಲಿದೆ. ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶ ಸರ್ಕಾರಕ್ಕಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯೂ ಪ್ರಮುಖ ವಿಷಯವಾಗಿದ್ದು, ಪ್ರಸ್ತುತ 2.6 ಕಿಲೋಮೀಟರ್ ಇರುವ ರನ್‌ವೇಯನ್ನು 3.5 ಕಿಲೋಮೀಟರ್‌ಗೆ ವಿಸ್ತರಿಸಿ ದೊಡ್ಡ ವಿಮಾನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಯೋಜನೆ ಕುರಿತು ಚರ್ಚೆ ನಡೆಯಲಿದೆ.

ಈ ಯೋಜನೆಗೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ವೇಗಗೊಳಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅದಾನಿ ಸಮೂಹ ₹75 ಕೋಟಿ ಅನುದಾನ ನೀಡಲು ಮುಂದೆ ಬಂದಿದ್ದು, ಸರ್ಕಾರದ ಬಳಿ ಈಗಾಗಲೇ 13 ಎಕರೆ ಭೂಮಿ ಲಭ್ಯವಿದೆ ಎಂದು ತಿಳಿದುಬಂದಿದೆ.

ಕರಾವಳಿ ಭಾಗದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷ ಅಪರಾಧಗಳು ಹಾಗೂ ಪ್ರತೀಕಾರದ ಹತ್ಯೆಗಳನ್ನು ತಡೆಯಲು ರಚಿಸಿರುವ ವಿಶೇಷ ಕಾರ್ಯಪಡೆಯ ಕಾರ್ಯವೈಖರಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ಇದೇ ವೇಳೆ, ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಅವರು ಕರಾವಳಿ ಅಭಿವೃದ್ಧಿಗೆ ಹೊಸ ನೀತಿಗಳಿಗಿಂತ ಈಗಿರುವ ನಿಯಮಗಳ ಸಡಿಲಿಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮರಳು ಗಣಿಗಾರಿಕೆ, ಕಂದಾಯ ಇಲಾಖೆ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ನಿಯಮಗಳನ್ನು ಸರಳಗೊಳಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಜುಲೈ 29ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಿಂದ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ಘೋಷಣೆಗಳು ಹೊರಬರುವ ನಿರೀಕ್ಷೆ ಇದ್ದು, ಕರಾವಳಿ ಭಾಗದ ಜನರ ಗಮನ ಇದೀಗ ಈ ಸಭೆಯತ್ತ ನೆಟ್ಟಿದೆ.

RELATED ARTICLES
- Advertisment -
Google search engine

Most Popular