ದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಕೇವಲ ರಾಜತಾಂತ್ರಿಕ ಅಥವಾ ರಾಜಕೀಯ ಮಟ್ಟಕ್ಕೆ ಮಾತ್ರ ಸೀಮಿತವಲ್ಲ. ದೈನಂದಿನ ಜೀವನದಿಂದ ಹಿಡಿದು ಕೈಗಾರಿಕೆ, ಕೃಷಿ ಮತ್ತು ಆರೋಗ್ಯ ಕ್ಷೇತ್ರದವರೆಗೆ ಬಾಂಗ್ಲಾದೇಶವು ಬಹುಮಟ್ಟಿಗೆ ಭಾರತದ ಮೇಲೆ ಅವಲಂಬಿತವಾಗಿದೆ. ಹಲವು ದಶಕಗಳಿಂದ ಈ ಎರಡು ನೆರೆಹೊರೆಯ ರಾಷ್ಟ್ರಗಳ ನಡುವೆ ಬಲವಾದ ವ್ಯಾಪಾರ ಸಂಬಂಧಗಳು ನಿರ್ಮಾಣವಾಗಿವೆ. ಆದರೆ ಇತ್ತೀಚಿನ ರಾಜಕೀಯ ಉದ್ವಿಗ್ನತೆ, ಆಂತರಿಕ ಬಿಕ್ಕಟ್ಟುಗಳು ಮತ್ತು ಭದ್ರತಾ ಸಮಸ್ಯೆಗಳು ಈ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸುತ್ತಿವೆ.
ಈ ನಿಟ್ಟಿನಲ್ಲಿ ಭಾರತದ ಮೇಲಿನ ಬಾಂಗ್ಲಾ ಅವಲಂಬನೆಯನ್ನು ನೋಡುವುದಾದರೇ:
ಬಾಂಗ್ಲಾದೇಶದ ಆಹಾರ ಭದ್ರತೆಯಲ್ಲಿ ಭಾರತದ ಪಾತ್ರ ಅತ್ಯಂತ ಪ್ರಮುಖವಾದದ್ದು. ಗೋಧಿ ಇದರ ಪ್ರಮುಖ ಉದಾಹರಣೆ. ನಿಷೇಧಕ್ಕೂ ಮುನ್ನದ ಅವಧಿಯಲ್ಲಿ, ಬಾಂಗ್ಲಾದೇಶವು ಭಾರತದಿಂದ ಸುಮಾರು 2.1 ಮಿಲಿಯನ್ ಮೆಟ್ರಿಕ್ ಟನ್ ಗೋಧಿ ಆಮದು ಮಾಡಿಕೊಂಡಿತ್ತು. ಇದರ ಮೌಲ್ಯ ₹6,500 ಕೋಟಿಗೂ ಅಧಿಕವಾಗಿತ್ತು. ಗೋಧಿಯ ಜೊತೆಗೆ, ಬಾಸ್ಮತಿಯ ಹೊರತಾಗಿ ಹಲವು ಬಗೆಯ ಅಕ್ಕಿಯನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗುತ್ತದೆ. ದೇಶೀಯ ಬೇಡಿಕೆ ಮತ್ತು ಸರ್ಕಾರಿ ಆಹಾರ ಸಂಗ್ರಹ ಪೂರೈಸಲು ಈ ಅಕ್ಕಿ ಅತ್ಯಗತ್ಯವಾಗಿದೆ.
ಮತ್ತೊಂದು ಮಹತ್ವದ ಸರಕೆಂದರೆ ಸಕ್ಕರೆ, 2021–22ರಲ್ಲಿ ಮಾತ್ರ ಬಾಂಗ್ಲಾದೇಶವು ಭಾರತದಿಂದ ₹5,000 ಕೋಟಿಗೂ ಹೆಚ್ಚು ಮೌಲ್ಯದ ಸಕ್ಕರೆಯನ್ನು ಖರೀದಿಸಿತ್ತು. ಇದು ಆಹಾರ ಸಂಸ್ಕರಣಾ ಉದ್ಯಮಕ್ಕೆ ಜೀವಾಳವಾಗಿದೆ. ಇದರ ಜೊತೆಗೆ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮುಂತಾದ ದಿನನಿತ್ಯದ ತರಕಾರಿಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಸರಬರಾಜಾಗುತ್ತವೆ. ಈ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ಬಾಂಗ್ಲಾದೇಶದಲ್ಲಿ ಬೆಲೆ ಏರಿಕೆ ಸಾಮಾನ್ಯವಾಗಿದ್ದು, ನೇರವಾಗಿ ಸಾಮಾನ್ಯ ಜನರ ಮೇಲೆ ಹೊಡೆತ ಬೀರುತ್ತದೆ. ಮಸಾಲೆ ಪದಾರ್ಥ, ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಸಂಸ್ಕರಿಸಿದ ಆಹಾರಗಳಿಗೂ ಬಾಂಗ್ಲಾದೇಶವು ಭಾರತವನ್ನು ಅವಲಂಬಿಸಿದೆ. ಆದರೆ ಅತ್ಯಂತ ಮಹತ್ವದ ಕ್ಷೇತ್ರವೆಂದರೆ ಜವಳಿ ಉದ್ಯಮ.
ಬಾಂಗ್ಲಾದೇಶದ ಜಿಡಿಪಿಗೆ ಸುಮಾರು 11% ಕೊಡುಗೆ ನೀಡುವ ಈ ಉದ್ಯಮವು ಭಾರತೀಯ ಹತ್ತಿಯ ಮೇಲೆ ನಂಬಿಕೆ ಇಟ್ಟಿದೆ. ಭಾರತದ ಒಟ್ಟು ಹತ್ತಿ ರಫ್ತಿನ ಸುಮಾರು 35% ಬಾಂಗ್ಲಾದೇಶಕ್ಕೆ ಹೋಗುತ್ತದೆ. ಹತ್ತಿಯ ಸರಬರಾಜು ಅಡ್ಡಿಪಡಿಸಿದರೆ, ಲಕ್ಷಾಂತರ ಉದ್ಯೋಗಗಳು ಅಪಾಯದಲ್ಲಿರುತ್ತವೆ. ಜೊತೆಗೆ, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು, ಪ್ಲಾಸ್ಟಿಕ್, ಉಕ್ಕು, ವಿದ್ಯುತ್ ಉಪಕರಣಗಳು ಮತ್ತು ಔಷಧಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಪೂರೈಕೆಯಾಗುತ್ತವೆ. ಆರೋಗ್ಯ ಕ್ಷೇತ್ರದಲ್ಲಿ ಭಾರತ ಪ್ರಮುಖ ಪೂರೈಕೆದಾರವಾಗಿದ್ದು, ಔಷಧಗಳ ಕೊರತೆ ಗಂಭೀರ ಪರಿಣಾಮ ಉಂಟುಮಾಡಬಹುದು ಎಂದು ಅಂದಾಜಿಸಲಾಗಿದೆ.
ಭೌಗೋಳಿಕವಾಗಿ ಬಾಂಗ್ಲಾದೇಶವು ಭಾರತದೊಂದಿಗೆ 4,367 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದ್ದು, ಇದು ಒಟ್ಟು ಗಡಿಯ 94% ಆಗಿದೆ. ಹೀಗಾಗಿ ಭಾರತದಿಂದ ಸರಕುಗಳನ್ನು ಅಗ್ಗವಾಗಿ, ತ್ವರಿತವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಈ ಅನುಕೂಲವನ್ನು ಚೀನಾ ಅಥವಾ ಬೇರೆ ದೇಶಗಳು ನೀಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಭಾರತದಿಂದ ಸರಬರಾಜು ಕಡಿತಗೊಂಡರೆ, ಬಾಂಗ್ಲಾದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಇತ್ತೀಚಿನ ಉದ್ವಿಗ್ನತೆಯ ನಡುವೆ ಭಾರತೀಯ ವೀಸಾ ಕೇಂದ್ರಗಳನ್ನು ಮುಚ್ಚಿರುವುದು ಹಾಗೂ ಭದ್ರತೆ ಹೆಚ್ಚಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಸರಳವಾಗಿ ಹೇಳುವುದಾದರೆ, ಭಾರತದ ಸರಬರಾಜುಗಳು ಬಾಂಗ್ಲಾದೇಶದ ಆರ್ಥಿಕತೆಯ ಊರುಗೋಲಿದ್ದಂತೆ. ಅದು ಬಿದ್ದು ಹೋದರೆ, ಅದರ ಪರಿಣಾಮ ದೇಶದ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗಿದೆ.



