Wednesday, October 15, 2025
Google search engine

Homeಆರೋಗ್ಯಪ್ರತೀ ಜಿಲ್ಲೆಯಲ್ಲೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ: ಸಚಿವ ಶರಣಪ್ರಕಾಶ ಪಾಟೀಲ

ಪ್ರತೀ ಜಿಲ್ಲೆಯಲ್ಲೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ: ಸಚಿವ ಶರಣಪ್ರಕಾಶ ಪಾಟೀಲ

ತುಮಕೂರು: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಸುಮಾರು 100 ಹಾಸಿಗೆಗಳ ನೂತನ ಕ್ಯಾನ್ಸರ್‌ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್‌ 7ರಂದು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್‌. ಪಾಟೀಲ ತಿಳಿಸಿದರು.

ಕ್ಯಾನ್ಸರ್‌ ಆಸ್ಪತ್ರೆ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿದ ಅವರು, ಕ್ಯಾನ್ಸರ್‌ ಆಸ್ಪತ್ರೆಯನ್ನು ರೋಗಿಗಳ ಚಿಕಿತ್ಸೆಗೆ ಕಾರ್ಯಾಚರಣೆಗೊಳಿಸಲು ಪ್ರಥಮ ಹಂತದಲ್ಲಿ ಸುಮಾರು 41 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗುವುದು. ಉಪಕರಣಗಳ ಅಳವಡಿಕೆಗೆ ನಾಲ್ಕೈದು ತಿಂಗಳು ಸಮಯ ಬೇಕಾಗಬಹುದು ಎಂದರಲ್ಲದೆ, ಉಪಕರಣ ಖರೀದಿಗಾಗಿ ಟೆಂಡರ್‌ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತೀ ದಿನ ಸುಮಾರು 20 ರಿಂದ 30 ಕ್ಯಾನ್ಸರ್‌ ರೋಗಿಗಳು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡುತ್ತಿದ್ದು, ಈ ರೋಗಿಗಳಿಗೆ ಕಿಮೋಥೆರಪಿ, ರೇಡಿಯೋ ಥೆರಪಿ ಹಾಗೂ ಆಂಕೊ ಸರ್ಜರಿ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಪ್ರತೀ ದಿನ ರಾಜ್ಯವಲ್ಲದೆ ಇತರೆ ರಾಜ್ಯದ ಕ್ಯಾನ್ಸರ್‌ ರೋಗಿಗಳೂ ಚಿಕಿತ್ಸೆಗೆ ಬರುತ್ತಿರುವುದರಿಂದ ಕಿದ್ವಾಯಿ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 24 ಸರ್ಕಾರಿ ಮೆಡಿಕಲ್‌ ಕಾಲೇಜುಗಳಿದ್ದು ಬಡವರು, ಸಾಮಾನ್ಯರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯ ನೀಡುವ ಉದ್ದೇಶದಿಂದ ಪ್ರತೀ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜನ್ನು ತೆರೆಯಲು ಯೋಜಿಸಲಾಗಿದೆ ಎಂದು ಹೇಳಿದರು.

ಮುಂದಿನ 5 ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್‌ ಆಸ್ಪತ್ರೆ, ಟ್ರಾಮಾ ಕೇರ್‌ ಸೆಂಟರ್‌ ನಿರ್ಮಿಸಲು ನಿರ್ಣಯಿಸಲಾಗಿದೆ. ಗುಲ್ಬರ್ಗಾ, ರಾಜಯಚೂರಿನಲ್ಲಿ ಈಗಾಗಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಬಳ್ಳಾರಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಕಳೆದ ಆಯವ್ಯಯದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.

ಕ್ಯಾನ್ಸರ್‌ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಪ್ರತೀ ಜಿಲ್ಲೆಯಲ್ಲಿಯೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಕಲ್ಬುರ್ಗಿಯಲ್ಲಿ ಈಗಾಗಲೇ ನಿರ್ಮಿಸಿರುವ 100 ಹಾಸಿಗೆಗಳುಳ್ಳ ಕ್ಯಾನ್ಸರ್‌ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಬಳ್ಳಾರಿ, ಬೀದರ್‌, ರಾಯಚೂರಿಗೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಶಿವಮೊಗ್ಗ, ಮಂಡ್ಯದಲ್ಲಿ ಕಟ್ಟಡ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್‌ ಹಾಗೂ ಸುರೇಶ್‌ ಗೌಡ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಸುಜಾತ ರಾಥೋಡ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್‌, ಜಿಲ್ಲಾ ಶಸಚಿಕಿತ್ಸಕ ಡಾ. ಅಸ್ಗರ್‌ ಬೇಗ್‌, ಕಿದ್ವಾಯಿ ಆಸ್ಪತ್ರೆಯ ಡಾ. ನವೀನ್‌, ಇಂಜಿನಿಯರ್‌ ಚಂದ್ರು, ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular