ವರದಿ :ಸ್ಟೀಫನ್ ಜೇಮ್ಸ್.
ಜೇವರ್ಗಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಮೂವರು ದುರ್ಮರಣ ಹೊಂದಿರುವ ಘಟನೆ ಇಂದು ಜೇವರ್ಗಿ ಹೊರವಲಯದ ಗೌನಳ್ಳಿ ಕ್ರಾಸ್ ಸಮೀಪ ನಡೆದಿದೆ.
ಮಹಾಂತೇಶ ಬೀಳಗಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಇವರ ಸಂಬಂಧಿಗಳಾದ ಶಂಕರ್ ಬೀಳಗಿ ಮತ್ತು ಈರಣ್ಣ ಬೀಳಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾಂತೇಶ ಬೀಳಗಿ ಅವರ ಕಾರು ಚಾಲಕ ರಾಜು ಹಾಗೂ ಈರಣ್ಣ ಶಿರಸಂಗಿ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ನಾಳೆ ಕಲಬುರಗಿಯಲ್ಲಿ ಮಹಾಂತೇಶ ಬೀಳಗಿ ಅವರ ಸಂಬಂಧಿಕರ ಮದುವೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯಪುರದಿಂದ ಕಲಬುರಗಿಗೆ ಆಗಮಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ಕಾರು ನಜ್ಜುಗುಜ್ಜಾಗಿದೆ.
ಡಿಸಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ(ಎಂಡಿ)ರಾಗಿದ್ದ ಮಹಾಂತೇಶ್ ಬೀಳಗಿ ಅವರು ಈ ಮೊದಲು ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಾಗರಿಕ ಸೇವೆಗೆ ಬರುವುದಕ್ಕೂ ಮುನ್ನ ಧಾರವಾಡದಲ್ಲಿ ಇಂಗ್ಲಿಷ್ ಕೋಚಿಂಗ್ ಮಾಡುತ್ತಿದ್ದರು.
ಸಂತಾಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ನೋವುಂಟು ಮಾಡಿದೆ. ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕವಾಗಿ ಅವರು ಸೇವೆ ಸಲ್ಲಿಸಿದ್ದರು. ಮಹಾಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಯಿಂದಾಗಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿಗಳಾದ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ವಿಧಿವಶರಾಗಿರುವುದು ಅತ್ಯಂತ ದುಃಖಕರ ಸಂಗತಿ. ಮಹಾಂತೇಶ್ ಬೀಳಗಿ ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು. ಜೊತೆಗೆ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಜನಪರ ಕಾರ್ಯಗಳ ಮೂಲಕ ಹೆಸರುವಾಸಿಯಾಗಿದ್ದ ದಕ್ಷ ಅಧಿಕಾರಿಯ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದ್ದಾರೆ.



