ಮಂಗಳೂರು (ದಕ್ಷಿಣ ಕನ್ನಡ) : ದನ ಕಳವು ಮಾಡಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೊಂಡು ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡನ ವಿರುದ್ಧ ಮಂಗಳೂರಿನಲ್ಲಿ ಕೇಸ್ ದಾಖಲಾಗಿದೆ.
ನರಸಿಂಹ ಶೆಟ್ಟಿ ಮಾಣಿ ಎಂಬಾತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್ 4 ರಂದು ರಾತ್ರಿ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ಮನೆ ಬಳಿಯಿರುವ ಹಟ್ಟಿಯಿಂದ ಕಿಡಿಗೇಡಿಗಳು ದನವೊಂದನ್ನು ಕಳವು ಮಾಡಿ ಹತ್ಯೆ ಮಾಡಿರುವ ಘಟನೆಯ ಬಗ್ಗೆ ನರಸಿಂಹ ಶೆಟ್ಟಿ ಮಾಣಿ ಎಂಬಾತನು ಮಾತನಾಡುವ ವೇಳೆ, ಘಟನೆಯ ಬಗ್ಗೆ ಸುಳ್ಳು ಸುದ್ದಿಯನ್ನು ನೀಡಿರುವುದಲ್ಲದೇ, ಧರ್ಮಗಳ ನಡುವೆ ಕೋಮು ದ್ವೇಷ ಹಾಗೂ ವೈರತ್ವ ಉಂಟಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವುದು ತಿಳಿದುಬಂದಿದೆ.
ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2025 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.