ಮಡಿಕೇರಿ : ಜಿಲ್ಲೆಯ ನೆರೆ ರಾಜ್ಯದಲ್ಲಿ ಕೋವಿಡ್-೧೯ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಗಡಿ ಭಾಗದಲ್ಲಿಯೂ ಸಹ ಅಗತ್ಯ ಮುನ್ನೆಚ್ಚರ ವಹಿಸುವುದು, ಜೊತೆಗೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ಸಲಹೆ ಮಾಡಿದ್ದಾರೆ. ವಿವಿಧ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರಿಶೀಲನಾ ಸಂದರ್ಭದಲ್ಲಿ ಅವರು ಮಾತನಾಡಿದರು.
ನೆರೆಯ ರಾಜ್ಯದಲ್ಲಿ ಕೆಲವು ದಿನಗಳಿಂದ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಏರಿಕೆಯಾಗುವುದರಿಂದ ಜಿಲ್ಲೆಯಲ್ಲಿಯೂ ಸಹ ಅಗತ್ಯ ಎಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರಸಾದ್ ಅವರು ಹೇಳಿದರು.
ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ ಗ್ರಾಮದ ಗಡಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವುದರ ಜೊತೆಗೆ ಅಗತ್ಯ ತಪಾಸಣೆ ಕೈಗೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಿಳಿಸಿದರು. ನೆರೆಯ ರಾಜ್ಯ ಮಾತ್ರವಲ್ಲದೆ ವಿವಿಧ ಕಡೆಗಳಲ್ಲಿ ಜೆಎನ್.೧ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಅಗತ್ಯ ಮುನ್ನೆಚ್ಚರ ವಹಿಸುವುದು ಅತ್ಯಗತ್ಯ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಆದರೂ ಎಲ್ಲರೂ ಮುನ್ನೆಚ್ಚರ ವಹಿಸಬೇಕಿದೆ ಎಂದು ಡಾ.ಎನ್.ವಿ.ಪ್ರಸಾದ್ ಅವರು ವಿವರಿಸಿದರು.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ, ಉಪಕರಣಗಳು ಇರಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಉಪಕರಣಗಳು ಹಾಗೂ ಸೌಲಭ್ಯಗಳು ಬೇಕಿದ್ದಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಡಿಎಚ್‌ಒಗೆ ಡಾ.ಪ್ರಸಾದ್ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಜಿಲ್ಲೆಯ ಗಡಿ ಪ್ರದೇಶದಲ್ಲಿ ಸರ್ಕಾರದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್, ವೆಂಟಿಲೇಟರ್, ಹಾಸಿಗೆ, ಔಷಧಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಲಹೆ ಮಾಡಿದರು. ಶಕ್ತಿ ಯೋಜನೆಯಡಿ ಜಿಲ್ಲೆಗೆ ಹೊಸ ಬಸ್‌ಗಳು ಶೀಘ್ರ ಬರಲಿದ್ದು, ಈಗಾಗಲೇ ಬಸ್ ಖರೀದಿಗೆ ಮುಂದಾಗಲಾಗಿದೆ ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾದ ಡಾ.ಎನ್.ವಿ.ಪ್ರಸಾದ್ ಅವರು ಹೇಳಿದರು.
ಯಾವ ಯಾವ ಊರುಗಳಿಗೆ ಬಸ್ ಅಗತ್ಯವಿದೆ. ಅಲ್ಲಿಗೆ ಬಸ್ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿ ಸರ್ಕಾರದ ನಿಯಮದಂತೆ ಪಡಿತರ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು. ಬಿಪಿಎಲ್, ಅಂತ್ಯೋದಯ ಅನ್ನಭಾಗ್ಯ ಯೋಜನೆ ಹೀಗೆ ಹಲವು ವಿಚಾರಗಳ ಕುರಿತು ಮಾಹಿತಿ ಪಡೆದರು. ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತೀ ಯೂನಿಟ್ ಸದಸ್ಯರಿಗೆ ೫ ಕೆ.ಜಿ ಅಕ್ಕಿಯಂತೆ ಉಚಿತವಾಗಿ ವಿತರಿಸಲಾಗುತ್ತಿದೆ. ಹಾಗೂ ಆದ್ಯತಾ(ಎಎವೈ) ಪಡಿತರ ಚೀಟಿದಾರರಿಗೆ ಪ್ರತೀ ಪಡಿತರ ಚೀಟಿಗೆ ೩೫ ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಕಿರಣ್ ಮಾಹಿತಿ ನೀಡಿದರು.