ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರನ್ನು ಬಳಸಿಕೊಂಡು ಮತ್ತೊಮ್ಮೆ ಜಾತಿ ಗಣತಿ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 10 ವರ್ಷದ ಹಿಂದೆ ಜಾತಿಗಣತಿ ನಡೆಸಲಾಗಿತ್ತು. ಈಗ ಮತ್ತೆ ಜಾತಿಗಣತಿ ನಡೆಸಲಾಗುತ್ತಿದೆ, ಸಮಾನತೆ ಉಳಿಯಲು ನಾವು ಬಿಡಬಾರದು. ಹೀಗಾಗಿ ಸಾಮಾಜಿಕ, ಶೈಕ್ಷಣಿಕ ವಲಯದಲ್ಲಿ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಎಲ್ಲಾ ಜನರಲ್ಲೂ ನಾನು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಲಾಗುವುದು, ಡಿಸೆಂಬರ್ ಒಳಗಾಗಿ ಸಮೀಕ್ಷೆ ಪೂರ್ಣಗೊಳ್ಳಲಿದೆ. 1.75 ಲಕ್ಷ ಮಂದಿ ಶಿಕ್ಷಕರನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಸಮೀಕ್ಷೆ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರೆ ಆಯೋಗದ ಸಹಾಯವಾಣಿ 8050770004 ನ್ನು ಸಂಪರ್ಕಿಸಿ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಆಯೋಗದ ವೆಬ್ ಸೈಟ್ ವಿಳಾಸ www.ksdckarnatakagovt.in ಮೂಲಕವೂ ಸಹ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶಿಕ್ಷಕರು ಸಮೀಕ್ಷೆ ಮಾಡುವ ಮೊದಲೇ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯ ಅರ್ಜಿ ಫಾರಂ ನೀಡುತ್ತಾರೆ. ಬೆಸ್ಕಾಂ ಸಿಬ್ಬಂದಿ ಮನೆಮನೆಗೆ ಸ್ಟಿಕರ್ ಅಂಟಿಸುತ್ತಾರೆ. ಮಾದರಿ ಸಮೀಕ್ಷೆಯ ಅರ್ಜಿ ಮೊದಲೇ ದೊರಕುವುದರಿಂದ ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರ ನೀಡಲು ಅನುಕೂಲವಾಗಲಿದೆ. ಸುಮಾರು 2 ಕೋಟಿ ಮನೆಗಳಿಗೆ ಸಮೀಕ್ಷಾ ಸಿಬ್ಬಂದಿ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.