Monday, September 22, 2025
Google search engine

Homeಅಪರಾಧಕಾನೂನುಕರ್ನಾಟಕದಲ್ಲಿ ಜಾತಿಗಣತಿ ಸರ್ವೇ ಆರಂಭ, ಹೈಕೋರ್ಟ್ ತಡೆಯಾಜ್ಞೆಯ ವಿಚಾರಣೆ ನಾಳೆ

ಕರ್ನಾಟಕದಲ್ಲಿ ಜಾತಿಗಣತಿ ಸರ್ವೇ ಆರಂಭ, ಹೈಕೋರ್ಟ್ ತಡೆಯಾಜ್ಞೆಯ ವಿಚಾರಣೆ ನಾಳೆ

ಬೆಂಗಳೂರು: ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆ ಇಂದಿನಿಂದ ಆರಂಭಗೊಂಡಿದೆ. ಈ ಜಾತಿಗಣತಿ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ನಾಳೆ ಮಧ್ಯಾಹ್ನ 2.30ಕ್ಕೆ ಜಾತಿಗಣತಿ ಕುರಿತಂತೆ ತಡೆಯಾಜ್ಞೆ ನೀಡುವ ಸಂಬಂಧದ ಅರ್ಜಿಯ ವಿಚಾರಣೆ ಮುಂದೂಡಿದೆ. ಈ ಮೂಲಕ ನಾಳೆ ಮಧ್ಯಾಹ್ನ 2.30ಕ್ಕೆ ಜಾತಿ ಗಣತಿ ಭವಿಷ್ಯವನ್ನು ನಿರ್ಧರಿಸಲಿದೆ.

ಇಂದು ಜಾತಿಗಣತಿ ಪ್ರಶ್ನಿಸಿ ಸಲ್ಲಿಸಿದ್ದಂತ ಪಿಐಎಲ್ ಅನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ್ ನಾದವಗಿ ವಾದ ಮಂಡಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಂಡಿಸಿ, ಜನಗಣತಿಗಿಂತ ಈ ಸರ್ವೆ ಯಾವ ರೀತಿಯಲ್ಲೂ ಕಡಿಮೆಯಲ್ಲ. ಜನಗಣತಿಯನ್ನು ಕೇಂದ್ರ ಸರ್ಕಾರವಷ್ಟೇ ಮಾಡಬೇಕೆಂದು ವಾದಿಸಿದರು.

ರಾಜ್ಯದೆಲ್ಲೆಡೆ ಸರ್ಕಾರ ಜಾತಿ ಗಣತಿಗೆ ಆದೇಶಿಸಿದೆ. ಸಂವಿಧಾನದ ಆರ್ಟಿಕಲ್ 342ಎ(3)ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ವರದಿ ಪರಿಗಣಿಸದೇ ಹೊಸ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

ಜಾತಿಗಣತಿಯ ಅಂಕಿ ಅಂಶಗಳನ್ನು ಆಧಾರ್ ಗೆ ಲಿಂಕ್ ಮಾಡ್ತಿದ್ದಾರೆ. ಜಿಯೋ ಟ್ಯಾಗಿಂಗ್ ಮಾಡಿ ಆಧಾರ್ ಲಿಂಕ್ ಮಾಡುತ್ತಿದ್ದಾರೆ. ಸರ್ಕಾರದ ಈ ಕ್ರಮ ಕಾನೂನು ಬಾಹಿರವಾಗಿದೆ ಎಂಬುದಾಗಿ ವಾದಿಸಿದರು.

ಅರ್ಜಿದಾರರ ಪರವಾಗಿ ಅಶೋಕ್ ಹಾರನಹಳ್ಳಿ ವಾದಿಸುತ್ತಾ ಹೊಸ ಜಾತಿಗಳನ್ನು ಸರ್ಕಾರ ಸೃಷ್ಠಿ ಮಾಡುತ್ತಿದೆ. ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ವಿಂಗಡಿಸಿದ್ದಾರೆ. ಯಾವುದೇ ಅಂಕಿ ಅಂಶದ ವಿಶ್ಲೇಷಣೆ ಇಲ್ಲದೆಯೂ ಜನಗಣತಿ ಮಾಡಲಾಗುತ್ತಿದೆ. ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲವೆಂದು ವಾದಿಸಿದರು.

ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಇದೇ ರೀತಿಯ ಪ್ರಕರಣದಲ್ಲಿ ಹಿಂದೆಯೂ ಮಧ್ಯಂತರ ತಡೆ ನೀಡಿಲ್ಲ. ಜನಗಣತಿ ಮಾಡುತ್ತಿಲ್ಲ. ಕೇವಲ ಸರ್ವೆ ಮಾಡುತ್ತಿದ್ದೇವೆ. ಹೀಗಾಗಿ ಯಾವುದೇ ಮಧ್ಯಂತರ ತಡೆ ನೀಡದಂತೆ ಮನವಿ ಮಾಡಿದರು.

ಅಂಕಿ-ಅಂಶ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸರ್ವೆ ಮೂಲಕ ಅಂಕಿ-ಅಂಶ ಸಂಗ್ರಹಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ, ಹಿಂದುಳಿದಿರುವಿಕೆಯ ಅಂಕಿ-ಅಂಶ ಸಂಗ್ರಹಿಸುತ್ತಿದ್ದೇವೆ ಎಂಬುದಾಗಿ ವಾದಿಸಿದರು.

ಆ ಬಳಿಕ ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದಿಸಿ, ಜನರ ಸ್ಥಿತಿ ಪರಿಶೀಲನೆ ಹಿಂದುಳಿದ ವರ್ಗಗಳ ಕರ್ತವ್ಯ ಅಲ್ಲ. ಸರ್ಕಾರ ರಾಜಕೀಯ ಉದ್ದೇಶದಿಂದ ಗಣತಿ ಮಾಡುತ್ತಿದೆ ಎಂದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭ್ರು ಬಖ್ರು ಅವರು ಎಲ್ಲಾ ಅರ್ಜಿದಾರರು ಸೇರಿ ನಿಮ್ಮ ಲಿಖಿತ ಸಾರಾಂಶ ಸಲ್ಲಿಸಿ. ಪ್ರತಿಯೊಬ್ಬರಿಗೂ ಎಷ್ಟು ಸಮಯ ಬೇಕೆಂದು ತಿಳಿಸಿ. ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ. ಸರ್ವೆ ಸದ್ಯಕ್ಕೆ ಮುಂದೂಡಲು ಸಾಧ್ಯವೇ ಎಂಬುದಾಗಿ ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿದರು.

ದಸರಾ ಬಳಿಕ ಅಂತಿಮ ವಿಚಾರಣೆ ನಡೆಸಬಹುದು. ಈಗ ಮಧ್ಯಂತರ ತಡೆ ಬೇಕಿಲ್ಲವೆಂದು ಸಿಂಘ್ವಿ ವಾದಿಸಿದರು. ಈ ವಾದ ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ನಾಳೆ ಮಧ್ಯಾಹ್ನ 2.30ಕ್ಕೆ ಜಾತಿಗಣತಿ ಪ್ರಶ್ನಿಸಿದ್ದ ಪಿಐಎಲ್ ಬಗ್ಗೆ ತಡೆಯಾಜ್ಞೆ ನೀಡುವ ಕುರಿತಂತೆ ವಿಚಾರಣೆ ನಿಗದಿ ಪಡಿಸಿ, ವಿಚಾರಣೆಯನ್ನು ಮುಂದೂಡಿದೆ.

RELATED ARTICLES
- Advertisment -
Google search engine

Most Popular