ಮೈಸೂರು: ನಗರದ ವರ್ತುಲ ರಸ್ತೆಯಲ್ಲಿ ಟ್ರಕ್‌ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸೆಸ್ಕ್ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆನಡೆದಿದೆ.
ಮೃತರನ್ನು ನಗರದ ಚಾಮುಂಡಿಪುರಂ ಉಪವಿಭಾಗದ ಸೆಸ್ಕ್ ಸೇವಾ ಕೇಂದ್ರದ ಸಿಬ್ಬಂದಿ ಹರೀಶ್ ರಾವ್(೫೮) ಎಂದು ಗುರುತಿಸಲಾಗಿದೆ.
ಕೊಡಗಿನ ವಿರಾಜಪೇಟೆ ಮೂಲದ ಇವರು ನಗರದ ರವಾಬಾಯಿ ನಗರದ ನಿವಾಸಿಯಾಗಿದ್ದರು. ಅವರು ತಮ್ಮ ಪತ್ನಿ ಸವಿತಾ ಮತ್ತು ಮಕ್ಕಳಾದ ಅರ್ಜುನ್ ರಾವ್ ಮತ್ತು ಸಾಯಿಕೃಷ್ಣ ರಾವ್ ಅವರನ್ನು ಅಗಲಿದ್ದಾರೆ.
ರಾತ್ರಿ ಪಾಳಿಯಲ್ಲಿದ್ದ ಹರೀಶ್ ರಾವ್ ಕೆಲಸ ಮುಗಿಸಿ ಬೈಕ್‌ನಲ್ಲಿ ಕಚೇರಿಯಿಂದ ಮನೆಗೆ ಹೊರಟಿದ್ದರು. ಜೆ.ಪಿ.ನಗರ ಬಳಿ ವರ್ತುಲ ರಸ್ತೆಯಲ್ಲಿ ರವಾಬಾಯಿ ನಗರದ ಕಡೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಟ್ರಕ್, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹರೀಶ್ ರಾವ್ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಟ್ರಕ್ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆ.ಆರ್. ಸಂಚಾರ ಠಾಣೆ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿದ್ದ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಎಸ್.ಜಾನ್ಹವಿ, ಎಸಿಪಿ ಪರಶುರಾಮಪ್ಪ ಭೇಟಿ ನೀಡಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.