- ಝಿಯೋನ್ ಸಂಸ್ಥೆಯಿಂದ 180 ಕೆವಿ ಚಾರ್ಜಿಂಗ್ ಕೇಂದ್ರ ಆರಂಭ
ಮೈಸೂರು, ಆಗಸ್ಟ್ 17, 2025: ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್ ಕೇಂದ್ರವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಉದ್ಘಾಟಿಸಿದರು.
ಬೆಂಗಳೂರಿನ ಎಪಿಕ್ ಎಂಟರ್ ಪ್ರೈಸನ್ ವತಿಯಿಂದ ಝಿಯಾನ್ ಎಲೆಕ್ಟ್ರಿಕ್ ಸಂಸ್ಥೆ ಸಹಯೋಗದಲ್ಲಿ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಆದಿತ್ಯ ಟೆಕ್ ಪಾರ್ಕ್ ಆವರಣದಲ್ಲಿ ಅತ್ಯಧಿಕ ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್ ಸ್ಟೇಷನ್ ಆರಂಭಿಸಲಾಗಿದೆ.

ನೂತನವಾಗಿ ಆರಂಭಿಸಿರುವ ಖಾಸಗಿ ಇವಿ ಚಾರ್ಜಿಂಗ್ ಸ್ಪೇಷನ್ ಮೈಸೂರು ಜಿಲ್ಲೆಯ ಮೊದಲ ಇ-ಬಸ್ ಚಾರ್ಜಿಂಗ್ ಕೇಂದ್ರವಾಗಿದ್ದು, 180 ಕಿಲೋ ವ್ಯಾಟ್ ಸಾಮರ್ಥ್ಯದ ಎರಡು ಚಾರ್ಜಿಂಗ್ ಹಬ್‌ಗಳನ್ನು ಈ ಚಾರ್ಜಿಂಗ್ ಸ್ಟೇಷನ್ ಒಳಗೊಂಡಿದೆ.
ಇವಿ ಹಬ್ ಆಗಿ ಮೈಸೂರು :
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇವಿ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಕರ್ನಾಟಕದಲ್ಲಿ 5,880 ಪಬ್ಲಿಕ್ ಚಾರ್ಜಿಂಗ್ ಸ್ಪೇಷನ್‌ಗಳಿವೆ. ಈ ನಿಟ್ಟಿನಲ್ಲಿ ಮೈಸೂರು ಇವಿ ಹಬ್ ಆಗಿಯೂ ಬೆಳೆಯುತ್ತಿದ್ದು, ಮೈಸೂರಿನಲ್ಲಿ ಪ್ರಸ್ತುತ 57 ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ಸ್ ಹಾಗೂ 20 ಖಾಸಗಿ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಟಿಯರ್-2 ಇವಿ ಹಬ್ ಆಗಿ ವೇಗವಾಗಿ ಬೆಳೆಯುತ್ತಿದೆ.
ಝಿಯೋನ್ ಸಂಸ್ಥೆ ಕುರಿತು :
2019ರಲ್ಲಿ ಆರಂಭವಾದ ಝಿಯೋನ್ ಎಲೆಕ್ಟ್ರಿಕ್ ಸಂಸ್ಥೆ ಇವಿ ಚಾರ್ಜಿಂಗ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ತಮಿಳುನಾಡಿನಲ್ಲಿ ಮೊದಲ ಇವಿ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಈ ಸಂಸ್ಥೆ, ಪ್ರಸ್ತುತ ದಕ್ಷಿಣ ಭಾರತದಲ್ಲಿ 450ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಪೇಷನ್‌ಗಳನ್ನು ಹೊಂದಿದ್ದು, ಇದರಲ್ಲಿ ಶೇ.99 ಚಾರ್ಜಿಂಗ್ ಸ್ಟೇಷನ್‌ಗಳು ಪ್ರಮುಖ ಹೆದ್ದಾರಿಗಳು ಮತ್ತು ಪ್ರವಾಸಿ ತಾಣಗಳಲ್ಲಿ ಹೊಂದಿದೆ.
ಈ ಸಂದರ್ಭದಲ್ಲಿ ಸೆಸ್ಕ್‌ನ ತಾಂತ್ರಿಕ ವಿಭಾಗದ ನಿರ್ದೇಶಕ ಡಿ.ಜೆ. ದಿವಾಕರ್, ಸೆಸ್ಕ್‌ನ ಐಟಿ ಮತ್ತು ಎಂಐಎಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮಸ್ವಾಮಿ ಸೆಸ್ಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ಝಿಯಾನ್ ಚಾರ್ಜಿಂಗ್ ಸ್ಟೇಷನ್‌ನ ಮುಖ್ಯಸ್ಥ ಅಖಿಲ್ ಕೃಷ್ಣನ್, ಬೆಂಗಳೂರಿನ ಎಪಿಕ್ ಎಂಟರ್‌ಪ್ರೈಸಸ್‌ನ ಚಿರಾಗ್ ಹಾಗೂ ವಿಶಾಲ್, ಇತರರಿದ್ದರು.
ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗಲಿದೆ. ಇದಕ್ಕಾಗಿ ಹೆಚ್ಚಿನ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೆಸ್ಕ್‌ನಲ್ಲಿ ಇವಿ ಸೆಲ್ ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಇವಿ ವಾಹನಗಳ ಬಳಕೆಯ ಮೂಲಕ ಎಲ್ಲರೂ ಹಸಿರು ಸಂಚಾರ ಕ್ರಾಂತಿಗೆ ಕೈಜೋಡಿಸಬೇಕಿದ್ದು, ಇದರಿಂದ ಗ್ರೀನ್ ಎನರ್ಜಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ಕೆ.ಎಂ. ಮುನಿಗೋಪಾಲ್ ರಾಜು