ಬೆಂಗಳೂರು : ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಸಿಇಟಿ ಪರೀಕ್ಷಾ ದಿನಾಂಕ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ 2024-25 ರಲ್ಲಿ ಪ್ರವೇಶಾತಿ ಬಯಸುವವರಿಗಾಗಿ ಮುಂಬರುವ ಏಪ್ರಿಲ್ 20 ಮತ್ತು 21ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಏ.20 ರ ಬೆಳಗ್ಗೆ 10.30 ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ ಗಣಿತ, 21 ರಂದು ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹಾಗೆಯೇ, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.19 ರ ಶುಕ್ರವಾರದಂದು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ಜನವರಿ 10 ರಿಂದ ನಿಗದಿತ ಶುಲ್ಕದೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ನ್ಯಾಚುರೋಪಥಿ ಮತ್ತು ಯೋಗ, ಬಿ.ಫಾರ್ಮಾ, ಫಾರ್ಮಾ-ಡಿ, ದ್ವಿತೀಯ ವರ್ಷದ ಬಿ.ಫಾರ್ಮಾ, ಕೃಷಿ ಕೋರ್ಸ್ಗಳು, ಪಶು ಸಂಗೋಪನೆ, ಬಿಎಸ್ಸಿ (ನರ್ಸಿಂಗ್), ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೂ ಈ ಸೂಚನೆ ಅನ್ವಯಿಸುತ್ತದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸರಿಯಾದ ಆರ್.ಡಿ. ಸಂಖ್ಯೆ, ಜಾತಿ/ಆದಾಯ ಪ್ರಮಾಣಪತ್ರ ಮತ್ತು ಕಲ್ಯಾಣ ಕರ್ನಾಟಕ (371 ಜೆ) ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅಗತ್ಯ ವಿವರಗಳನ್ನು ದಾಖಲಿಸಬೇಕು. ತಪ್ಪಿದಲ್ಲಿ, ಇಂಥವರು ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂಜಿನಿಯರಿಂಗ್ ನ 3ನೇ ಸೆಮಿಸ್ಟರ್ ಗೆ ನೇರ ಪ್ರವೇಶಾತಿ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18 ರಂದು ಸಿಇಟಿ ನಡೆಸಲಾಗುವುದು. ಇಂಥವರು ಅರ್ಜಿ ತುಂಬಲು ಸದ್ಯದಲ್ಲೇ ಪೋರ್ಟಲ್ ತೆರೆಯಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಿದೆ.
ಅದೇ ರೀತಿಯಲ್ಲಿ ಎಂಬಿಎ, ಎಂಸಿಎ, ಎಂ.ಇ, ಎಂ.ಟೆಕ್, ಎಂ.ಆರ್ಕ್ ಕೋರ್ಸ್ ಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಏ.18 ಮತ್ತು 19 ರಂದು ಪಿಜಿಸಿಇಟಿ ನಡೆಸಲಾಗುವುದು. ಇವರಿಗೂ ಸಹ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಪೋರ್ಟಲ್ ತೆರೆಯಲಾಗುವುದು ಎಂದು ಹೇಳಿದ್ದಾರೆ.
2023ರಲ್ಲಿ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸಿ ನಂತರ ಸೀಟು ರದ್ದುಪಡಿಸಿಕೊಂಡಿರುವ ಅಥವಾ ಹೆಚ್ಚುವರಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಆ ಬಾಬ್ತಿನ ಮೊತ್ತವನ್ನು ಹಿಂದಿರುಗಿಸುತ್ತಿದೆ. ಆದರೆ, ಕೆಲವರ ಅರ್ಜಿಗಳಲ್ಲಿ ಬ್ಯಾಂಕ್ ವಿವರಗಳು ತಪ್ಪಾಗಿದ್ದು, ಅಂತವರ ಹೆಸರುಗಳನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಇಂಥವರು ಡಿ.31ರೊಳಗೆ ಸರಿಯಾದ ವಿವರ ನಮೂದಿಸಬೇಕು ಎಂದು ಪ್ರಾಧಿಕಾರವು ತಿಳಿಸಿದೆ.