ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿನ ನಂತರ ಇದೀಗ ಜಿಲ್ಲೆಯ ಕೊತ್ತಲವಾಡಿ ಸಮೀಪದಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದ್ದು, ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪ್ರದೀಪ್ ಎಂಬುವವರ ಗಣಿ ತ್ಯಾಜ್ಯದ ಜಮೀನಿನಲ್ಲಿ ಸುಮಾರು 5 ವರ್ಷದ ಗಂಡು ಚಿರತೆಯ ಶವ ಪತ್ತೆಯಾಗಿದ್ದು, ಅದರ ಸಮೀಪದಲ್ಲಿಯೇ ಕರು ಮತ್ತು ನಾಯಿಯ ಶವವೂ ಪತ್ತೆಯಾಗಿದೆ. ಘಟನೆ ಸ್ಥಳಕ್ಕೆ ಬಿ.ಆರ್.ಟಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ವಿಷಪ್ರಾಶನದಿಂದ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತನಿಖೆಗೆ ಬಂಡೀಪುರದಿಂದ ಶ್ವಾನ ದಳವನ್ನು ಕರೆಸಲಾಗಿದೆ. ಮೆಟಲ್ ಡಿಟೆಕ್ಟರ್ ಬಳಸಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 2-3 ದಿನಗಳ ಹಿಂದೆಯೇ ಚಿರತೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಇದೇ ಭಾಗದಲ್ಲಿ ಹಿಂದೆ ಮೂರು ಹುಲಿಗಳೂ ಮೃತಪಟ್ಟಿದ್ದು, ಅವುಗಳಿಗೂ ವಿಷ ಪ್ರಯೋಗವೇ ಕಾರಣವಾಗಿರಬಹುದೆಂಬ ಅನುಮಾನಗಳು ಮತ್ತೆ ಜೀವಂತವಾಗಿವೆ. ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿತ್ತು. ಘಟನೆಯಿಂದ ಅರಣ್ಯ ಇಲಾಖೆ ಹೆಚ್ಚಿನ ತನಿಖೆಗೆ ಮುಂದಾಗಿದೆ.