ಬೆಂಗಳೂರು : ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಸಿಎಂ ಪುತ್ರ ಯತೀಂದ್ರ ಹೇಳಿದ ಬೆನ್ನಲ್ಲೇ, ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ವಿಧಾನ ಪರಿಷತ್ ಸದಸ್ಯರೊಬ್ಬರು ಉಲ್ಲೇಖಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ತೆರೆ ಮರೆಯಲ್ಲಿ ಹೊಗೆಯಾಡುತ್ತಲೇ ಇವೆ. ಮೇಲ್ನೋಟಕ್ಕೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಒಂದು ಸಾಲಿನ ಹೇಳಿಕೆಯನ್ನು ನೀಡಿ ಎಲ್ಲವನ್ನು ತಣಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ನಡೆಸುತ್ತಿದ್ದಾರೆ. ಆದರೆ ಆಂತರಿಕವಾಗಿ ಜ್ವಾಲಾಮುಖಿಯಂತೆ ಈ ವಿಚಾರ ಕುದಿಯುತ್ತಲೇ ಇದೆ ಎನ್ನಲಾಗುತ್ತಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಬಹಿರಂಗ ಹೇಳಿಕೆಗಳ ಮೂಲಕ ಗೊಂದಲ ಮೂಡಿಸಬಾರದು ಮತ್ತು ವಿರೋಧ ಪಕ್ಷಗಳಿಗೆ ಅಸ್ತ್ರವಾಗಬಾರದು ಎಂಬ ಕಾರಣಕ್ಕೆ ಎರಡೂ ಬಣಗಳ ನಾಯಕರು ಅವುಡುಗಚ್ಚಿ ತಾಳೆಯಿಂದ ಇದ್ದು, ಈ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ನಿನ್ನೆ ಹೇಳಿಕೆ ನೀಡುವ ಮೂಲಕ ಮುಂದಿನ ಐದು ವರ್ಷಗಳವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಆಗಿ ಮುಂದುವರೆಯಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನುಡಿದು ತಣ್ಣಗಿದ್ದ ವಿವಾದವನ್ನು ಮತ್ತೆ ಕೆಣಕಿದ್ದಾರೆ.
ಇದಕ್ಕೆ ತಿರುಗೇಟು ಎಂಬಂತೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ನಿನ್ನೆ ಹೈದರಾಬಾದ್ ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದರು. ಹೀಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮೊದಲ ದಿನ ಭಾಗವಹಿಸಿರಲಿಲ್ಲ. ಇಂದು ಅಧಿವೇಶನಕ್ಕಾಗಿ ಬೆಳಗಾವಿಗೆ ಆಗಮಿಸಿದ್ದಾರೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರಿಗೆ ಚೆನ್ನರಾಜ ಹಟ್ಟಿಹೊಳಿ ವಿಮಾನನಿಲ್ದಾಣದಲ್ಲೇ ಸ್ವಾಗತ ಕೋರಿದ್ದು, ಈ ಕುರಿತ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಾಗ ಚೆನ್ನರಾಜ ಹಟ್ಟಿಹೊಳಿ ಎಡವಟ್ಟು ಮಾಡಿಕೊಂಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಳದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಸಾಂಬ್ರ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಈ ವೇಳೆ ಶಾಸಕ ಆಸಿಫ್ ಸೇಠ್, ಮಾಜಿ ಶಾಸಕ ಶ್ಯಾಮ್ ಘಾಟೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿನಯ ನಾವಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು ಎಂದು ಪೋಸ್ಟ್ ಮಾಡಿದ್ದಾರೆ. ನಂತರ ಅರ್ಧಗಂಟೆಯ ಬಳಿಕ ಇದೇ ಪೋಸ್ಟನ್ನು ತಿದ್ದುಪಡಿ ಮಾಡಿ ಮುಖ್ಯಮಂತ್ರಿ ಬದಲಾಗಿ ಉಪಮುಖ್ಯಮಂತ್ರಿಯೆಂದು ಸರಿ ಪಡಿಸಲಾಗಿದೆ.
ಇದು ಕಣ್ತಪ್ಪಿನಿಂದ ನಡೆದಿರುವ ಅಚಾತುರ್ಯ ಎಂದು ಭಾವಿಸುವ ಬದಲಾಗಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಡಿ.ಕೆ. ಶಿವಕುಮಾರ್ ಬಣ ಟಾಂಗ್ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರರಾಗಿರುವ ಚನ್ನರಾಜ ಹಟ್ಟಿಹೊಳಿ ಡಿ.ಕೆ.ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಣ್ ತಪ್ಪಿನಿಂದ ಆಗಿರುವ ಎಡವಟ್ಟು ಕೂಡ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ಆಕಸ್ಮಿಕ ಅಚಾತುರ್ಯವೋ ಅಥವಾ ಉದ್ದೇಶಪೂರ್ವಕವೋ ಎಂಬ ಪರ-ವಿರೋಧ ಅಭಿಪ್ರಾಯಗಳು ಚರ್ಚೆಯಾಗುತ್ತಿವೆ. ಚಳಿಗಾಲದ ಅಧಿವೇಶನದಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ರಾಜಕಾರಣವನ್ನು ಕಾವೇರುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.



