ಚಿಕ್ಕೋಡಿ: ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ ಎಂದು ಕಾರ್ಮಿಕ ಸಚಿವ ಮತ್ತು ಮರಾಠಾ ಸಮುದಾಯದ ನಾಯಕ ಸಂತೋಷ್ ಲಾಡ್ ಅವರು ಭಾನುವಾರ (ಡಿ.28) ಹೇಳಿದ್ದಾರೆ.
ಈ ಕುರಿತು ಚಿಕ್ಕೋಡಿ ಪಟ್ಟಣದ ಪದ್ಮ ಮಂಗಲ್ ಕಾರ್ಯಾಲಯದಲ್ಲಿ ನಡೆದ ಚಿಕ್ಕೋಡಿ ತಾಲೂಕಿನ ಮರಾಠಾ ಸಮುದಾಯದ ಸಮಾವೇಶದಲ್ಲಿ ಮಾತನಾಡಿರುವ ಅವರು, ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಮರಾಠಾ ಸಮುದಾಯದ ದಾರಿತಪ್ಪಿಸುವವರನ್ನು ಯುವಕರು ನಂಬಬಾರದು ಎಂದು ತಿಳಿಸಿದರು.
ಮರಾಠಾ ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಅದು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಗತಿ ಸಾಧಿಸಬಹುದು. ಮರಾಠಾ ಸಮುದಾಯ ಇಂದು ಅನೇಕ ಅಂಶಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಸಮುದಾಯವನ್ನು ಉನ್ನತೀಕರಿಸಲು ಬಲವಾದ ಸಂಘಟನೆ ಅತ್ಯಗತ್ಯ ಎಂದರು.
ಈ ವೇಳೆ ರಾಜಕೀಯ ಅಥವಾ ವಿಭಜಕ ಉದ್ದೇಶಗಳಿಗಾಗಿ ಶಿವಾಜಿ ಮಹಾರಾಜರ ಪರಂಪರೆಯನ್ನು ತಪ್ಪಾಗಿ ಪ್ರತಿನಿಧಿಸಬಾರದು. ರಾಜಕೀಯದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ಸಮಾಜ ಸೇವೆಯೇ ತನ್ನ ಮೊದಲ ಆದ್ಯತೆಯಾಗಿದೆ ಎಂದರು.
ಇಲ್ಲಿಯವರೆಗೆ ಬಂದಿರುವ ಯಾವುದೇ ಸರ್ಕಾರ ಮರಾಠಾ ಸಮಾಜಕ್ಕೆ ವಿಶೇಷವಾದುದನ್ನು ಏನನ್ನೂ ಮಾಡಿಲ್ಲ. ಇತರ ಸಮಾಜಕ್ಕಿಂತ ಮರಾಠಾ ಸಮಾಜ ಹಿಂದುಳಿದಿದ್ದು, ಸಮಾಜದ ಸಂಘಟನೆಗಾಗಿ ಹಣ ನೀಡಲು ಸಾಧ್ಯವಿಲ್ಲದೆ ಇದ್ದವರು ಸಮಯವನ್ನು ನೀಡಿ. ಸಮಾಜಕ್ಕೆ ಸಮಯ ನೀಡುವವರು ಹಣ ನೀಡಿದವರಿಗಿಂತ ದೊಡ್ಡವರು. ರಾಜ್ಯಾದ್ಯಂತ ಮರಾಠಾ ಸಮಾಜವನ್ನು ಬಲಿಷ್ಠವಾಗಿ ಕಟ್ಟಬೇಕು ಎಂಬ ಹಂಬಲವಿದೆ ಎಂದು ತಿಳಿಸಿದರು.
ಬಳಿಕ ಮಾಜಿ ಸಚಿವ ಶ್ರೀಮಂತ ಪಾಟೀಲ್ ಮಾತನಾಡಿ, ಮರಾಠಾ ಸಮುದಾಯ ಒಗ್ಗೂಡಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾವು ಸ್ವಾಭಿಮಾನದಿಂದ ಬದುಕಬೇಕಿದೆ. ಬಂಡವಾಳ ಇಲ್ಲ ಎಂದು ಸಮಾಜದ ಯುವಕರು ಕೈಕಟ್ಟಿ ಕೂರದೇ ಕಡಿಮೆ ಬಂಡವಾಳವಿದ್ದರೂ ಉದ್ಯೋಗ ಮಾಡುವಂತಹ ಕೌಶಲ್ಯಗಳಿದ್ದು, ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಅಜೀತ ನಿಂಬಾಳಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಹೆಚ್.ಮರಿಯೋಜಿರಾವ್, ಮುಖಂಡ ಬಿ.ಆರ್.ಯಾದವ, ರಾಮಾ ಮಾನೆ, ಅನಿಲ ಮಾನೆ, ಬಾಳಸಾಹೇಬ ಪಾಟೀಲ, ಸುಪ್ರಿಯಾ ದೇಸಾಯಿ, ಟಿ.ಎಸ್.ಮೋರೆ, ಕಾಶಿನಾಥ ಸುಳಕುಡೆ, ಕಿಶೋರ ಪವಾರ, ಜ್ಯೋತಿಬಾ ಕಾಮಕರ, ರಂಜೀತ ಶಿರಶೇಟ, ಅನಿಲ ಪಾಟೀಲ, ಅಣ್ಣಾ ಪವಾರ, ಅಪ್ಪಾಸಾಹೇಬ ಪವಾರ, ಪಾಂಡುರಂಗ ಮಾನೆ, ಅಮರ ಯಾದವ ಇತರರು ಪಾಲ್ಗೊಂಡಿದ್ದರು.



