ಮೈಸೂರು: ರಾಜಕೀಯ ಬದ್ದವೈರಿಗಳೆಂದೇ ಹೇಳಲಾಗುವ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಭೇಟಿಯಾಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ಮನೆಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ಸಂಸದರ ಆರೋಗ್ಯ ವಿಚಾರಿಸಿದ್ದಾರೆ.
ಈ ಬಾರಿ ಮೈಸೂರು – ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಗೆಲಲ್ಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ತಮ್ಮ ಸಂಪೂರ್ಣ ಗಮನವನ್ನು ತವರು ಜಿಲ್ಲೆಯತ್ತ ಹರಿಸಿದ್ದಾರೆ. ಈಗಾಗಲೇ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗಿದ್ದು, ತವರು ಜಿಲ್ಲೆಯ ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಸಿಎಂ ಪಣ ತೊಟ್ಟಿದ್ದಾರೆ.
ಇದರ ಭಾಗವಾಗಿ ಬಿಜೆಪಿಯ ಚಾಮರಾಜನಗರ ಸಂಸದರಾದ ರಾಜಕೀಯ ಬದ್ದವೈರಿಗಳಾದ ವಿ. ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸುವ ಮೂಲಕ ರಾಜಕೀಯ ತಂತ್ರ ರೂಪಿಸಿದ್ದಾರೆ. ಈ ಮೂಲಕ ಚಾಮರಾಜನಗರ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಬೆಂಬಲಿಗರನ್ನು ಸೆಳೆಯುವ ತಂತ್ರ ಮಾಡಿದ್ದಾರೆ ಎನ್ನಲಾಗಿದೆ.
ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀನಿವಾಸ್ ಪ್ರಸಾದ್ ನಾವು ತುಂಬಾ ವರ್ಷಗಳ ಸ್ನೇಹಿತರು. ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಅವರು ಚುನಾವಣಾ ರಾಜಕೀಯದಿಂದ ನಿವೃತಿಯಾಗುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ, ರಾಜಕೀಯ ಬೆಂಬಲವನ್ನೂ ಕೇಳಿಲ್ಲ. ಆದರೂ ನೀವು ಸುದೀರ್ಘ ಕಾಲ ಕಾಂಗ್ರೆಸ್‌ನಲ್ಲಿ ಇದ್ದವರು, ಕಾಂಗ್ರೆಸ್ ಬಗ್ಗೆ ಅನುಕಂಪ ಇರಲಿ ಎಂದಷ್ಟೇ ಕೇಳಿದ್ದೇನೆ ಎಂದು ಹೇಳಿದರು.