ಮಕ್ಕಳಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಮೂಡಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಅಗ್ನಿಶಾಮಕ ದಳದವರ ಮಹತ್ವದ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಕೆನರಾ ನಂದಗೋಕುಲ ಶಾಲೆ ಕೋಡಿಯಾಲ್ ಬೈಲ್ ಹಾಗೂ ಪದವಿನಂಗಡಿ ಶಾಖೆಗಳ ಮಕ್ಕಳು ಶೈಕ್ಷಣಿಕ ಕ್ಷೇತ್ರಪ್ರವಾಸದ ಅಂಗವಾಗಿ ಪಾಂಡೇಶ್ವರದ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿದರು .
ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅಗ್ನಿಶಾಮಕ ದಳದವರ ಕರ್ತವ್ಯಗಳು, ಅಗ್ನಿ ಸುರಕ್ಷತಾ ಸಾಧನಗಳು, ಅಗ್ನಿಶಾಮಕ ಹಾಗೂ ರಕ್ಷಣಾ ವಾಹನಗಳ ಕಾರ್ಯವಿಧಾನವನ್ನು ವಿವರಿಸಿದರು. ಬೆಂಕಿಯನ್ನು ನಂದಿಸಲು ಬಳಸುವ ವಿವಿಧ ವಿಧಾನಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಮಕ್ಕಳು ಕುತೂಹಲದಿಂದ ಈ ಪ್ರದರ್ಶನಗಳನ್ನು ವೀಕ್ಷಿಸಿ ಸುರಕ್ಷತಾ ಸೂಚನೆಗಳನ್ನು ಗಮನಪೂರ್ವಕವಾಗಿ ಆಲಿಸಿದರು.
ದೈನಂದಿನ ಜೀವನದ ತುರ್ತು ಸಂದರ್ಭಗಳಲ್ಲಿ ಪ್ರತಿಕೂಲ ಪರಿಸ್ಥಿತಿಗೆ ಪ್ರತಿಕ್ರಿಯಿಸುವುದು,ಜಾಗರೂಕತೆ ವಹಿಸುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಸರಿಸುವ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಲಾಯಿತು. ಈ ಶೈಕ್ಷಣಿಕ ಪರಿವೀಕ್ಷಣಾ ಪ್ರವಾಸವು ಮಕ್ಕಳಿಗೆ ಅರಿವಿನ ಅವಿಸ್ಮರಣೀಯ ಅನುಭವ ನೀಡಿದ್ದು, ಅಗ್ನಿಶಾಮಕ ದಳದವರ ಸಮಾಜಮುಖಿ ಸೇವೆಯ ಕುರಿತು ಗೌರವ ಮತ್ತು ಕೃತಜ್ಞತೆಯ ಭಾವನೆ ಮೂಡಿಸಲು ಸಹಾಯವಾಯಿತು.
ಶಾಲೆಯ ಶೈಕ್ಷಣಿಕ ಮತ್ತು ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಉಜ್ವಲ್ ಮಲ್ಯ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



