ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರ ಅಮಾನತನ್ನು ರದ್ದುಪಡಿಸಿದ ಕೇಂದ್ರ ಆಡಳಿತ ನ್ಯಾಯಮಂಡಳಿಯ (CAT) ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಾರ್ತಾ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರ ಸೂಕ್ಷ್ಮವಾಗಿ ಪರಿಗಣನೆ ಮಾಡಲಿದೆ ಎಂದರು.
ಶಾಸಕ ಬಿ.ಆರ್. ಪಾಟೀಲ್ ಅವರ ‘ಸಿದ್ದರಾಮಯ್ಯರು ಅದೃಷ್ಟದಿಂದ ಮುಖ್ಯಮಂತ್ರಿ ಆಗಿದ್ದಾರೆ’ ಎಂಬ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ. ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದರಿಂದ ಹಾಗೂ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ, ಬಿ.ಆರ್.ಪಾಟೀಲ್ ರವರು ಈ ರೀತಿ ಹೇಳಿಕೆ ನೀಡಿರಬಹುದು ಎಂದು ಹೇಳಿದರು.
ಜಾತಿಗಣತಿ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ, “ಮನೆಯ ಮುಂದೇ ಪೋಸ್ಟರ್ ಅಂಟಿಸಿ, ಮನೆಗೆ ಭೇಟಿ ನೀಡದಿರುವ ಪ್ರಕರಣಗಳ ಕುರಿತು ಮಾಧ್ಯಮಗಳು ತಪಾಸಣೆ ನಡೆಸಬೇಕು. ಆನ್‌ಲೈನ್ ಅಥವಾ ಮನೆಯ ಭೇಟಿಯ ಮೂಲಕ ಜಾತಿ ವಿವರ ಪಡೆದುಕೊಳ್ಳಬಹುದು,” ಎಂದು ತಿಳಿಸಿದರು.