ಮೈಸೂರು : ನಗರದ ಮಹಿಳೆಯೊಬ್ಬರಲ್ಲಿ ಕಾಲರಾ ಸೋಂಕು ಕಾಣಿಸಿಕೊಂಡಿದ್ದು, ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿರ್ಮೂಲನೆಯಾಗಿದ್ದ ಕಾಲರಾ ಸಾಂಕ್ರಾಮಿಕ ರೋಗ ಹಲವು ವರ್ಷಗಳ ಬಳಿಕ ಇದೀಗ ಮತ್ತೆ ಪತ್ತೆಯಾಗಿದೆ.
ಕಾಲರಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಅದರಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಡಾ.ಮಧು ತಿಳಿಸಿದರು. ಕಾಲರಾ ಕಾಣಿಸಿಕೊಂಡ ಬಡಾವಣೆ ಸುತ್ತಮುತ್ತಲಿನ ನಿವಾಸಿಗಳ ೬೦೦ ಕ್ಕೂ ಹೆಚ್ಚು ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಆದರೆ ಬೇರೆ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಈ ಕಾರಣ ಸೋಂಕು ಬಂದ ಮಹಿಳೆಯ ಟ್ರಾವೆಲ್ ಹಿಸ್ಟರಿ ಪರೀಕ್ಷಿಸಲಾಗುತ್ತಿದೆ. ಇದರಿಂದ ಅವರು ಬೇರೆ ಎಲ್ಲಾದರೂ ನೀರು, ಆಹಾರ ಪದಾರ್ಥ ಸೇವಿಸಿದ್ದರೆ ಎಂಬುದು ತಿಳಿದು ಬರಲಿದೆ.
ಜತೆಗೆ ಮೈಸೂರು ನಗರದ ಸುತ್ತಮುತ್ತ ಎಲ್ಲೂ ನೀರಿನಿಂದ ಹರಡುವ ರೋಗಗಳಾಗಲಿ ಅಥವಾ ರೋಗ ಲಕ್ಷಣಗಳಾಗಲಿ ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮ ಜರುಗಿಸುವ ನಿಟ್ಟಿನಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರುವೆ . ಅಗತ್ಯ ಕಂಡು ಬಂದಲ್ಲಿ, ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ಪೂರೈಸುವ ಸಂಬಂದ ಸೂಚನೆ ನೀಡಲಾಗುವುದು. ಜತೆಗೆ ಶುಚಿತ್ವದ ಕಡೆ ಗಮನ ಹರಿಸುವಂತೆಯೂ ಆದೇಶಿಸಲಾಗುತ್ತದೆ ಎಂದರು.