ವರದಿ :ಸ್ಟೀಫನ್ ಜೇಮ್ಸ್.
ಚನ್ನಮ್ಮ ವೃತ್ತ, ದೇಶಪಾಂಡೆ ನಗರ, ಐಟಿ ಪಾರ್ಕ್, ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪ ರಸ್ತೆ, ಹೊಸೂರು ವೃತ್ತ, ಗದಗ ರಸ್ತೆ ಸೇರಿದಂತೆ ಯಾವ ಮಾರ್ಗದಲ್ಲಿ ಹೋದರೂ ಧೂಳಿನ ಕಾಟ ತಪ್ಪುತ್ತಿಲ್ಲ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ಭಾಗಶಃ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮತ್ತೊಂದೆಡೆ ನಿರ್ಮಾಣ ಹಂತದಲ್ಲಿರುವ ಬೃಹತ್ ಕಾಮಗಾರಿಗಳಿಂದ ರಸ್ತೆ ಸಂಚಾರ ಅಯೋಮಯವಾಗಿದ್ದು, ಅದರಿಂದ ಏಳುವ ಧೂಳು ಅವಳಿ ನಗರದ ಜನತೆಯನ್ನು ಹೈರಾಣು ಮಾಡಿದೆ. ತಗ್ಗು-ಗುಂಡಿ ಹಾಗೂ ಧೂಳಿನ ಕಿರಿಕಿರಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಓಡಾಡುವುದಕ್ಕೆ ಸಾಧ್ಯವೇ ಇಲ್ಲದಷ್ಟು ಅವಳಿ ನಗರದ ಭಾಗಶಃ ರಸ್ತೆಗಳು ಹದಗೆಟ್ಟಿದ್ದು, ಹೇಗೆ ಮತ್ತು ಎಲ್ಲಿಂದ ರಸ್ತೆಯನ್ನು ಸರಿಪಡಿಸುವುದೆಂದು ಗೊತ್ತಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಕೆಸರು ಗದ್ದೆಯಂತಾಗುವ ಇಲ್ಲಿನ ರಸ್ತೆಗಳು, ಬಿಸಿಲು ಬಿದ್ದರೆ ಧೂಳಿನ ಮಜ್ಜನವಾಗುತ್ತದೆ. ಪರಿಣಾಮ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನರಿಗೆ ಕಾಡುತ್ತಿರುವ ಕಾಯಿಲೆಗಳು: ನಗರದ ಮಧ್ಯ ಭಾಗದಲ್ಲಿ ಫ್ಲೈ ಓವರ್ ಕೆಲಸ ನಡೆಯುತ್ತಿದೆ. ಪರಿಣಾಮ ಹುಬ್ಬಳ್ಳಿಯ ಹೊಸೂರು ಸರ್ಕಲ್, ಬಸವವನ, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೋರ್ಟ್ ಸರ್ಕಲ್‌ಗಳ ವ್ಯಾಪ್ತಿಯ ಕೆಳ ರಸ್ತೆಗಳಲ್ಲಿ ವಾಹನಗಳು ‘ಕ್ರಾಸ್ ಕಂಟ್ರಿ ರೇಸ್’ ಮಾಡುತ್ತಿವೆ. ಕರ್ತವ್ಯದಲ್ಲಿರುವ ಪೊಲೀಸರು ವಾಹನ ಸವಾರರ ಈ ಒದ್ದಾಟವನ್ನು ಅಸಹಾಯಕತೆಯಿಂದ ನೋಡುವಂತಾಗಿದೆ. ಹೀಗೆ ಮಳೆಯಲ್ಲಿ ಗುಂಡಿಗಳ ಹಾವಳಿಯಿಂದ ತತ್ತರಿಸಿದ್ದ ಜನ, ಈಗ ಗುಡ್ಡಗಾಡು ಓಟವನ್ನು ನಿತ್ಯ ಮಾಡುವಂತಾಗಿದೆ. ಜನ ಇಷ್ಟು ಪರದಾಡುತ್ತಿದ್ದರೂ ಕಾರ್ಪೋರೇಟರ್‌ಗಳಾಗಲಿ, ಮಹಾನಗರದ ಪ್ರಥಮ ಪ್ರಜೆಯಾಗಲಿ ಕೆಟ್ಟ ರಸ್ತೆಗಳ ಬಗ್ಗೆ ಮಾತ್ರ ಎಲ್ಲಿಯೂ ಚಕಾರ ಎತ್ತುತ್ತಿಲ್ಲ.

ಮೊದಲೇ ರಸ್ತೆಗಳು ಹಾಳಾಗಿವೆ. ಈಗ ಎಲ್ಲೆಡೆ ಧೂಳು ತುಂಬಿ, ಜನರನ್ನು ಆಸ್ತಮಾ ರೋಗಿಗಳನ್ನಾಗಿಸುವ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಮೇಲ್ಸೇತುವೆ ಕಾಮಗಾರಿ ಬರುವ ಮುನ್ನವೇ ನಗರದ ವಾತಾವರಣ ಧೂಳಿನಿಂದ ಕೂಡಿತ್ತು. ಈಗ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಸಂಚಾರ ಮಾರ್ಗದಲ್ಲಿ ಬದಲಾವಣೆ ಆಗಿದೆ. ಎಲ್ಲಿ ಬೇಕೆಂದರಲ್ಲಿ ರಸ್ತೆಗಳು ಗುಂಡಿ ಬಿದ್ದು, ಸಾರ್ವಜನಿಕರಿಗೆ ಧೂಳಿನ ಮಜ್ಜನ ಖಚಿತವಾಗಿದೆ. ಧೂಳಿನ ಪ್ರಮಾಣ ಹೆಚ್ಚಾಗಿದ್ದರಿಂದ ಆಸ್ತಮಾ, ಕೆಮ್ಮು ಸೇರಿ ಇತರ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ಬೇಸರ ಹೊರಹಾಕುತ್ತಿದ್ದಾರೆ.
ನಗರದ ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಹಳೇ ಕೋರ್ಟ್ ವೃತ್ತ, ದೇಶಪಾಂಡೆ ನಗರ, ಐಟಿ ಪಾರ್ಕ್, ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪ ರಸ್ತೆ, ಹೊಸೂರು ವೃತ್ತ, ಗದಗ ರಸ್ತೆ ಸೇರಿದಂತೆ ಯಾವ ಮಾರ್ಗದಲ್ಲಿ ಹೋದರೂ ಧೂಳಿನ ಸಿಂಚನವಾಗುತ್ತಿದೆ. ಸುತ್ತಲಿನ ಅಂಗಡಿಯವರು ನಿತ್ಯವೂ ಧೂಳಿನ ಗೋಳು ಅನುಭವಿಸುತ್ತಿದ್ದಾರೆ. ಕೆಲವರು ಮಾಸ್ಕ್ ಧರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಬಿಸಿಲು ಬರುತ್ತಿದ್ದಂತೆ ಧೂಳಿನ ಪ್ರಮಾಣ ಹೆಚ್ಚಾಗುತ್ತಿದ್ದು, ಬಸ್, ಲಾರಿ, ಇತರೆ ವಾಹನಗಳು ಸಂಚರಿಸಿದರೆ ಧೂಳು ಆವರಿಸುತ್ತದೆ. ಅವುಗಳ ಹಿಂದೆ ಸಂಚರಿಸುವ ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಿಕೆಗೆ ನಗರ ಸಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಸ್ಥಳೀಯರ ಆಕ್ರೋಶ: ಈ ಕುರಿತು ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪ್ರತಿಕ್ರಿಯಿಸಿ, ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೊರ ಜಿಲ್ಲೆಗಳಿಂದ ನಿತ್ಯ ಲಕ್ಷಾಂತರ ಜನರು ವ್ಯಾಪಾರಕ್ಕೆ ಆಗಮಿಸುತ್ತಾರೆ. ಹುಬ್ಬಳ್ಳಿಗೆ ಸ್ಮಾರ್ಟ್ ಸಿಟಿ ಬಂದು 5-6 ವರ್ಷ ಕಳೆದರೂ ಸ್ಮಾರ್ಟ್ ಆಗಿ ಕಾಣುತ್ತಿಲ್ಲ. ಆದ್ರೆ ಅಧಿಕಾರಿಗಳು ಮಾತ್ರ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ. ಎಸಿ ಕಾರಿನಲ್ಲಿ ಓಡಾಡುತ್ತಾರೆ. ಆದ್ರೆ ಅಟೋ ಚಾಲಕರು, ಟ್ರಾಫಿಕ್ ಪೊಲೀಸರು ಹಾಗೂ ಬೀದಿ ಬದಿ ವ್ಯಾಪಾರಿಗಳು ಬಿಳಿ ಶರ್ಟ್ ಹಾಕಿಕೊಂಡು ಬಂದರೆ ಮನೆಗೆ ಹೋಗುವಷ್ಟರಲ್ಲಿ ಕೆಂಪು ಬಣ್ಣದ ಶರ್ಟ್ ಆಗುತ್ತದೆ. ಅಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಧೂಳು ಮುಕ್ತ ಹುಬ್ಬಳ್ಳಿ ಯಾವಾಗ? ಎಲ್ಲಿನೋಡಿದರೂ ಧೂಳು ಧೂಳು.. ಧೂಳಿನಿಂದ ಕಫಾ, ಕೆಮ್ಮಿನಿಂದ ಅನೇಕ ಜನ ಆಸ್ಪತ್ರೆಗೆ ಸೇರುತ್ತಿದ್ದಾರೆ. ಅಧಿಕಾರಿಗಳು ರಸ್ತೆಗಳನ್ನು ಸರಿಪಡಿಸಿ ಧೂಳು ಮುಕ್ತ ನಗರ ಮಾಡಬೇಕು. ಇಲ್ಲವಾದ್ರೆ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೇಯರ್ ಮೇಡಂ ಹೀಗಂತಾರೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಅವರು ಪ್ರತಿಕ್ರಿಯಿಸಿ, ಯಾವುದಾದ್ರೂ ಅಭಿವೃದ್ಧಿ ಕೆಲಸವಾಗುವಾಗ ಧೂಳು ಆಗುವುದು ಸಾಮಾನ್ಯ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ. ಹೀಗಾಗಿ ಮಹಾನಗರ ಪಾಲಿಕೆಯಿಂದ ನೀರು ಸಿಂಪಡಣೆ ಮಾಡಲಾಗುತ್ತಿದೆ. ಆದ್ರೆ ನೀರು ಹೊಡೆದ ಮೇಲೆ ಮತ್ತೆ ಒಣಗಿ ಹೋಗುತ್ತದೆ. ನಾವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಹೇಳಿದ್ದೇವೆ. ಚನ್ನಮ್ಮ ಸರ್ಕಲ್, ಹೊಸೂರು ಸರ್ಕಲ್, ಬಿಜಾಪುರ ರೋಡ್ ಬಹಳ ಧೂಳು ಆಗುತ್ತಿರುವುದರಿಂದ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಾಮಗಾರಿ ಪೂರ್ಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು 6-8 ತಿಂಗಳು ಕೇಳಿದ್ದಾರೆ. ಎರಡು ತಿಂಗಳಲ್ಲಿಯೇ ಅವಳಿನಗರ ಧೂಳು ಮುಕ್ತ ಮಾಡುವುದಾಗಿ ಹಸಿರು ನ್ಯಾಯಾಧಿಕರಣಕ್ಕೆ ಅಫಿಡವಿಟ್ ಕೊಟ್ಟಿದ್ದು ನಿಜ. ಆರ್ಡರ್ ಹಾಕುವವರೆಗೂ ತೊಂದರೆಯಾಗುವುದು ತಪ್ಪುವುದಿಲ್ಲ. ಅದಷ್ಟು ಈ ಸಮಸ್ಯೆಗೆ ಮಹಾನಗರ ಪಾಲಿಕೆ ಅಂತ್ಯ ಆಡಲಿದೆ ಎಂದು ಮೇಯರ್ ಭರವಸೆ ನೀಡಿದ್ದಾರೆ.



