ಮಂಗಳೂರು (ದಕ್ಷಿಣ ಕನ್ನಡ) : ಬೈಕಂಪಾಡಿ ಕೈಗಾರಿಕಾ ವಲಯದ ಹೆದ್ದಾರಿ ಸಂಪರ್ಕಿಸುವ ರಸ್ತೆ ಸೇರಿದಂತೆ ಬಹುತೇಕ ಒಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಗುಂಡಿ ಮುಚ್ಚಿ ರಸ್ತೆ ದುರಸ್ಥಿ ಗೊಳಿಸಲು ಒತ್ತಾಯಿಸಿ, ನಾಗರಿಕರು ಮತ್ತು ಆಟೋ ರಿಕ್ಷಾ ಚಾಲಕರು ಡಿವೈಎಫ್ಐ ಬೈಕಂಪಾಡಿ ಘಟಕದ ನೇತೃತ್ವದಲ್ಲಿ ಬೈಕಂಪಾಡಿ ಕ್ರಾಸ್ ಬಳಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ನೆಲ ಜಲವನ್ನು ತ್ಯಾಗ ಮಾಡಿದ ಜನರನ್ನೇ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮಾಡುವ ದುಸ್ಥಿತಿಗೆ ತಂದು ನಿಲ್ಲಿಸಿದೆ.
ಜನಪ್ರತಿನಿದಿನಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ, ನಮ್ಮ ಕ್ಷೇತ್ರದ ಶಾಸಕರು ಅಸೆಂಬ್ಲಿ ಅಧಿವೇಶನದಲ್ಲಿ ತನ್ನ ಕ್ಷೇತ್ರದ ಬಗ್ಗೆ ಮಾತನಾಡುತ್ತಿಲ್ಲ, ರಸ್ತೆ ಗುಂಡಿಗೆ ಬಿದ್ದು ಸಾವು ನೋವು ಸಂಭವಿಸುವ ಕುಟುಂಬಗಳ ಭಾವನೆ ಮತ್ತು ಗುಂಡಿಗಳಿಗೆ ಬಿದ್ದು ಕಷ್ಟ ನಷ್ಟ ಅನುಭವಿಸುವ ಬಡ ರಿಕ್ಷಾ, ಟೆಂಪೋ ಚಾಲಕರ ನೋವು ಜನಪ್ರತಿನಿದಿನಗಳಿಗೆ ಅರ್ಥವಾಗುತ್ತಿಲ್ಲ, ಮುಂದಿನ ಹದಿನೈದು ದಿನದೊಳಗೆ ರಸ್ತೆ ದುರಸ್ಥಿ ಆಗದಿದ್ದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ರಸ್ತೆ ಗುಂಡಿಗಳಿಂದ ಅಪಘಾತ ಸಂಭಾವಿಸಿದಾಗ ಪೊಲೀಸರು ರಸ್ತೆ ನಿರ್ಲಕ್ಷ್ಯ ಮಾಡಿದ ಇಲಾಖೆಗಳ ಅಧಿಕಾರಿಗಳ ಮೇಲೆ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.
ಡಿವೈಎಫ್ಐ ಸುರತ್ಕಲ್ ವಲಯ ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಮಾತನಾಡಿದರು.ಬೈಕಂಪಾಡಿ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ನವೀನ್ ಬೈಕಂಪಾಡಿ, ಪ್ರಮುಖರಾದ ಪೂವಪ್ಪ ದೇವಾಡಿಗ, ಮೋನಪ್ಪ, ಲತೀಫ್ ಅಂಗರಗುಂಡಿ, ಶಾಫಿ, ಶಬ್ಬೀರ್, ಮುಸ್ತಫಾ ಎಸ್.ಎಂ ಫಾರೂಕ್ ದೇಶ್ ಪ್ರೇಮಿ,ಟೆಂಪೋ ಚಾಲಕರ ಸಂಘದ ನಾಯಕರಾದ ಫೈವ್ ಸ್ಟಾರ್ ಖಾದರ್, ರಹೀಮ್, ಹೈದರ್, ಅಬ್ದುಲ್ ಕಾದರ್, ಬಸ್ ಮಾಲಕರ ಸಂಘದ ಇಚ್ಛಾಲಿ ಎಸ್. ಎಂ,ಡಿವೈಎಫ್ಐ ಮುಖಂಡರಾದ ಬಿ.ಕೆ ಮಕ್ಸೂದ್, ತೌಸೀಫ್ ಅಂಗರಗುಂಡಿ, ಶಕೀಲ್, ನಿಜಾಮ್, ಮುಸ್ತಫಾ, ನವಾಜ್ ಕುಳಾಯಿ, ಇಕ್ಬಾಲ್ ಜೋಕಟ್ಟೆ, ಸಾದಿಕ್ ಮೂಲ್ಕಿ, ಅನ್ಸಾರ್, ಫರಾನ್,ಸೈಫಲ್, ಸಾಬಿತ್,ಜಿಯಾದ್, ನಿಶಾನ್ ಎಂ.ಕೆ, ನಾಸಿರ್, ರಫೀಕ್ ನೌಫಾನ್, ರಾಝಿಕ್, ಎನ್.ಎಫ್.ಸಿ ಕ್ರಿಕೆಟರ್ಸ್ ಪ್ರಮುಖರಾದ ಸಲೀಮ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.