ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರು ನಗರದ ಹಲವೆಡೆ ಮಹಾನಗರಪಾಲಿಕೆಯ ಅಧಿಕಾರಿಗಳು ಗುರುವಾರ ಪೊಲೀಸ್ ಬಲ ಪ್ರಯೋಗಿಸಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಘೇರಾವ್ ಹಾಕಲಾಯ್ತು.
ಈ ದಾಳಿ ಕಾನೂನು ಬಾಹಿರ ಮತ್ತು ಬಡ ಬೀದಿ ವ್ಯಾಪಾರಿಗಳ ಮೇಲಿನ ದಾಳಿ ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಆರೋಪಿಸಿದೆ.
ನಗರಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರದ ನಿಯಮ ಮತ್ತು ಕಾನೂನುಗಳನ್ನು ಪಾಲಿಸುತ್ತಿಲ್ಲ. ನಗರಪಾಲಿಕೆ ಆಡಳಿತ ವ್ಯವಸ್ಥೆ ಯಲ್ಲಿ ಜನರ ಪ್ರತಿನಿಧಿಗಳು ಇಲ್ಲ, ನಗರಪಾಲಿಕೆಯ ವ್ಯಾಪ್ತಿಯಲ್ಲಿ ಪಟ್ಟಣ ವ್ಯಾಪಾರ ಸಮಿತಿ ಅಸ್ತಿತ್ವದಲ್ಲಿಲ್ಲ. ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಕುಂದುಕೊರತೆ ನಿವಾರಣಾ ಸಮಿತಿಯು ಇಲ್ಲ,, ಮೇಲ್ಮನವಿ ಪ್ರಾಧಿಕಾರವೂ ಅಸ್ತಿತ್ವದಲ್ಲಿ ಇಲ್ಲದಿರುವಾಗ ಕಾರ್ಯಾಚರಣೆ ನಡೆಸಿರುವುದು ಅಧಿಕಾರಿಗಳ ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಸಿಐಟಿಯು ಟೀಕಿಸಿದೆ.
ಸ್ಟೇಟ್ ಬ್ಯಾಂಕ್ ಬಳಿ ಸಂಚಾರಿ ಸಮಸ್ಯೆಗಳಾಗಲೀ, ಸಾರ್ವಜನಿಕರ ದೂರು ಇಲ್ಲದಿರುವಾಗ ಅಧಿಕಾರಿಗಳು ಧಾಳಿ ನಡೆಸುತ್ತಿರುವುದು ಅಧಿಕಾರಿಗಳು ಯಾರದೋ ಕುಮ್ಮಕ್ಕಿನಿಂದ ದಾಳಿ ನಡೆಸುತ್ತಿದ್ದಾರೆ ಎಂಬ ಅನುಮಾನ ಬರುತ್ತಿದೆ. ಕಂಟೋನ್ಮೆಂಟ್ ವಾರ್ಡ್ ನಲ್ಲಿ ನಿರ್ಮಾಣಗೊಂಡಿರುವ ಬೀದಿ ವ್ಯಾಪಾರ ವಲಯ ಅಸಮರ್ಪಕವಾಗಿದೆ ಮತ್ತು ಅವೈಜ್ಞಾನಿಕವಾಗಿದೆ.
ಅಲ್ಲದೇ ಹತ್ತಿರದ ವಾರ್ಡಿನಲ್ಲಿ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಯುತ್ತಿರುವುದರಿಂದ ಗ್ರಾಹಕರು ವ್ಯಾಪಾರ ವಲಯದ ಒಳಗೆ ಬಾರದೆ ವ್ಯಾಪಾರ ನಡೆಸಿದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವುದು ಅಮಾನವೀಯ ಕ್ರಮವಾಗಿದೆ, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು ನಗರದಲ್ಲಿ ಬಡ ಬೀದಿ ವ್ಯಾಪಾರಿಗಳ ಮೇಲೆ ಧಾಳಿ ಮುಂದುವರಿದರೆ ಬೀದಿ ವ್ಯಾಪಾರಿಗಳನ್ನು ಸಂಘಟಿಸಿ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷರಾದ ಬಿಕೆ ಇಮ್ತಿಯಾಝ್ ಮತ್ತು ಕಾರ್ಯಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ