ಹಾಸನ : 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಅದೇ ಶಾಲೆಯ ಬಸ್ ಚಾಲಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ಶಾಲೆ ಬಸ್ ಚಾಲಕ ತಲೆಮರಿಸಿಕೊಂಡಿದ್ದಾನೆ. ನಿತ್ಯ ಬಸ್ನಲ್ಲಿರುವ ವಿದ್ಯಾರ್ಥಿನಿಗೆ ಚಾಕೋಲೆಟ್ ನೀಡಿ ಪುಸಲಾಯಿಸಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ. ಪರಿಣಾಮ ಇದೀಗ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು, ಎರಡು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ.
ಹಾಸನ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ ಮೇಲೆ ಅದೇ ಶಾಲೆಯಲ್ಲಿ ವಾಹನ ಚಾಲಕನಾಗಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ ಬರಗೂರು ಗ್ರಾಮದ ರಂಜನ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದ್ದು, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿಯುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾನೆ.
ಪ್ರತಿ ದಿನ ಶಾಲೆಗೆ ಬಸ್ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ರಂಜತ್ ಪುಸಲಾಯಿಸಿ ಶ್ರವಣಬೆಳಗೊಳಕ್ಕೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದರಿಂದ ವಿದ್ಯಾರ್ಥಿನಿ ಎರಡು ದಿನದ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನು ಬಾಲಕಿ ಮತ್ತು ಮಗುವನ್ನು ಕೆಲ ದಿನಗಳ ಕಾಲ ಆರೈಕೆ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಶೀಘ್ರ ಒಪ್ಪಿಸಲು ಅಧಿಕಾರಿಗಳು ತೀರ್ಮಾನಿಸಿದ್ದು, ಈ ಬಗ್ಗೆ ರಂಜತ್ ವಿರುದ್ಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ತನಿಖೆ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ 16 ವರ್ಷದ ಶಾಲಾ ಬಾಲಕಿ ಸಂಬಂಧಿಕನಿಂದಲೇ ದೌರ್ಜನ್ಯಕ್ಕೊಳಗಾಗಿ ಗಂಡು ಮಗುವಿಗೆ ಜನ್ಮ ನೀಡಿರುವಂತಹ ಘಟನೆ ನಡೆದಿತ್ತು. ಬಳಿಕ ಪೋಕ್ಸೋ ಪ್ರಕರಣದಡಿ ಆರೋಪಿ ಮಲ್ಲೇಶ್ (35)ನನ್ನು ಪೊಲೀಸರು ಬಂಧಿಸಿದ್ದರು.
ಇನ್ನು ಯಾದಗಿರಿ ಜಿಲ್ಲೆಯ ಶಹಪುರದಲ್ಲಿರುವ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದಾಗ ಗಂಡುವಿಗೆ ಜನ್ಮ ನೀಡಿದ್ದಳು. ಈ ಘಟನೆ ವಸತಿ ನಿಲಯದಲ್ಲಿರುವ ಇತರೆ ವಿದ್ಯಾರ್ಥಿನಿಯ ಪೋಷಕರಲ್ಲಿ ಆತಂಕ ಹುಟ್ಟಿಸಿತ್ತು. ಘಟನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.
ಕೊಪ್ಪಳ ಜಿಲ್ಲೆಯ ಕುಕನೂರು ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅತ್ಯಾಚಾರ ಆರೋಪಿ ಸೇರಿದಂತೆ ನಿರ್ಲಕ್ಷ್ಯ ತೋರಿದ ವಸತಿ ನಿಲಯದ ಸಿಬ್ಬಂದಿ ಸೇರಿ ಒಟ್ಟು 6 ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.



