ಚಾಮರಾಜನಗರ: ಸ್ವಚ್ಛತೆ ಎಲ್ಲರಿಗೂ ಅಗತ್ಯವಾಗಿ ಬೇಕು. ಸ್ವಚ್ಛತೆಯು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಟಿ.ಕವಿತಾ ಕರೆ ನೀಡಿದರು.
ನಗರದ ಹೊರವಲಯದ ಯಡಬೆಟ್ಟದ ಅಮೃತ ಸರೋವರ ಸುತ್ತುಕಟ್ಟೆಯಲ್ಲಿ ಜಿಪಂ, ತಾಪಂ, ಶಿವಪುರ ಗ್ರಾಪಂ ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ ಕಾಯಕ್ರಮದಡಿ ಆಯೋಜಿಸಲಾಗಿದ್ದ ಶ್ರಮದಾನದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಚ್ಛ ಭಾರತ್ ನಿರ್ಮಿಸುವ ನಿಟ್ಟಿನಲ್ಲಿ ಸ್ವಚ್ಛತೆಯನ್ನು ಪರಿಪಾಲಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ರಸ್ತೆಯಲ್ಲಿ ಉಗುಳಬಾರದು. ಹಸಿಕಸ, ಒಣಕಸವನ್ನು ಬೇರ್ಪಡಿಸಿ ಪರಿಸರ ಸ್ವಚ್ಛತೆಗೆ ಸಹಕರಿಸಬೇಕು ಎಂದರು. ಪರಿಸರ ಸ್ವಚ್ಛತೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಆ ಮೂಲಕ ಸ್ವಚ್ಛ ಭಾರತ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಮೋನಾ ರೋತ್ ಮಾತನಾಡಿ, ಪರಿಸರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಶ್ರಮದಾನ ಮಾಡಲಾಗುತ್ತಿದೆ. ಜಿಲ್ಲೆಯ ೧೩೦ ಗ್ರಾಮಪಂಚಾಯಿತಿಗಳಲ್ಲೂ ಶ್ರಮದಾನ ಮಾಡುವ ಮೂಲಕ ಪರಿಸರ ಸ್ವಚ್ಛತೆ ಮಾಡಲಾಗುವುದು. ಆ ಮೂಲಕ ಪ್ರತಿಯೊಬ್ಬರಲ್ಲಿಯೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.