ಮಂಗಳೂರು: ಇತ್ತೀಚಿಗೆ ರಾಜಕೀಯ ಹಂಚಿಕೆ ಬಗ್ಗೆ ರಾಜ್ಯದಲ್ಲಿ ಭಾರಿ ಗದ್ದಲ ಉಂಟುಮಾಡಿರುವ ಹಿನ್ನಲೆ, ಮಂಗಳೂರಿನಲ್ಲಿ ಸಿಎಂ-ಡಿಸಿಎಂ ಬೆಂಬಲಿಗರಿಂದ ಜೈಕಾರ ಘೋಷಣೆಯ ಬಣ ಬಡಿದಾಟ ನಡೆಯುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಸಮಾಧಾನ, ಬಣ ರಾಜಕೀಯ ಇನ್ನೂ ಶಮನಗೊಂಡಿಲ್ಲ.
ಇಂದು ಬುಧವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಡಿ ಕೆ ಶಿವಕುಮಾರ್ ಪರ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು.ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ ಐತಿಹಾಸಿಕ ನಾರಾಯಣ ಗುರು-ಮಹಾತ್ಮ ಗಾಂಧಿ ಸಂವಾದದ ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಈ ವೇಳೆ ವೇಣುಗೋಪಾಲ್ ಟರ್ಮಿನಲ್‌ನಿಂದ ನಿರ್ಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರ ಗುಂಪೊಂದು ಶಿವಕುಮಾರ್‌ಗೆ ಬೆಂಬಲ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿತು. ನಂತರ, ಸಿದ್ದರಾಮಯ್ಯ ಬಂದಾಗ ಅವರ ಬೆಂಬಲಿಗರು ‘ಸಿದ್ದು, ಸಿದ್ದು, ಪೂರ್ಣಾವಧಿ ಸಿದ್ದು’ ಎಂಬ ಘೋಷಣೆಗಳೊಂದಿಗೆ ಪ್ರತಿ ಘೋಷಣೆ ಕೂಗಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್ ಪರ ಗುಂಪಿನ ನಾಯಕ ಮಿಥುನ್ ರೈ, ಪಕ್ಷದೊಳಗೆ ನಾಯಕರ ಮಧ್ಯೆ ಯಾವುದೇ ಪೈಪೋಟಿ ಇಲ್ಲ. ಆದರೆ ಅನೇಕ ಕಾರ್ಯಕರ್ತರು “ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ನೋಡಲು ಸಂತೋಷಪಡುತ್ತಾರೆ” ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಸರ್ಕಾರ ಒಗ್ಗಟ್ಟಾಗಿದೆ ಎಂದು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರೂ, ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ನೀಡಬೇಕೆಂದು ಬಹಿರಂಗವಾಗಿ ಬೆಂಬಲ ನೀಡುವ ಶಾಸಕರು ಸೇರಿದಂತೆ ಅವರ ಬೆಂಬಲಿಗರ ಇತ್ತೀಚಿನ ಹೇಳಿಕೆಗಳು ಸಿಎಂ ಹುದ್ದೆ ಬದಲಾವಣೆ ಚರ್ಚೆಯನ್ನು ಜೀವಂತವಾಗಿಸಿದೆ ಎಂದರು
ಬಳಿಕೆ ಡಿ ಕೆ ಶಿವಕುಮಾರ್ ಕೂಡ ಕಳೆದ ವಾರ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತುಕತೆಗಳನ್ನು ಆಧಾರರಹಿತ ಊಹಾಪೋಹ ಎಂದು ಸಿದ್ದರಾಮಯ್ಯ ತಳ್ಳಿಹಾಕಿದ್ದು, ಪಕ್ಷವನ್ನು ಬಲಪಡಿಸುವುದು ಮತ್ತು ಆಡಳಿತವನ್ನು ನಿರ್ವಹಿಸುವುದರ ಮೇಲೆ ತಮ್ಮ ಗಮನವಿದೆ ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿದರು.
ಈ ಹಿನ್ನಲೆ ಇಂದು ಮಂಗಳೂರಿಗೆ ತೆರಳಿದ ಸಿಎಂ ಸಿದ್ದರಾಮಯ್ಯನವರಿಗೆ ಅಹಿಂದ ನಾಯಕರು ಸಾಥ್ ನೀಡಿದ್ದಾರೆ. ಮಂಗಳೂರಿನ ಉಳ್ಳಾಲದಲ್ಲಿ ಗಾಂಧಿ- ಗುರು ಸಂವಾದದ 100 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಹಿಂದ ಸಚಿವರು ಸಾಥ್ ನೀಡುತ್ತಿದ್ದು, ಆದರೆ ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.



