ಕಲಬುರಗಿ: ರಾಜ್ಯದ ಉತ್ತರ ಭಾಗಗಳಾದ್ಯಂತ ಭಾರೀ ಮಳೆಯಿಂದಾಗಿ ಹಾಗೂ ಅಣೆಕಟ್ಟುಗಳ ನೀರು ಬಿಡುಗಡೆಯಿಂದಾಗಿ ಕೃಷ್ಣಾ ಮತ್ತು ಭೀಮಾ ನದಿಗಳ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಲಬುರಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳ ನದಿ ತೀರ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಇಂದು ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ವಿಮಾನ ನಿಲ್ದಾಣದಲ್ಲೇ ಪ್ರಾಥಮಿಕ ಸಭೆ ನಡೆಸಿ ವಿವರವಾದ ಮಾಹಿತಿ ಪಡೆದರು. ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲಾ ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿದ್ದು, ಸಿಎಂ ಅವರಿಗೆ ವಿವರಗಳನ್ನು ನೀಡಿದ್ದಾರೆ.
ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸಚಿವರಾದ ಎಂಬಿ ಪಾಟೀಲ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಅವರ ಜೊತೆಯಲ್ಲಿ ಮೊದಲ ಸುತ್ತಿನ ವೈಮಾನಿಕ ಸಮೀಕ್ಷೆಗೆ ತೆರಳಿದರು. ಇದಾದ ಬಳಿಕ ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿನ ಬೆಳೆ ಹಾನಿ ಕುರಿತು ಎರಡನೇ ಸುತ್ತಿನ ವೈಮಾನಿಕ ಸಮೀಕ್ಷೆಯನ್ನು ಮಧ್ಯಾಹ್ನ 2:30 ರ ಸುಮಾರಿಗೆ ಕೈಗೊಳ್ಳಲಿದ್ದಾರೆ.
ಈಗಾಗಲೇ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಸಿಎಂ ಭಾನುವಾರ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮತ್ತು ಮಹಾರಾಷ್ಟ್ರದ ಉಜನಿ ಮತ್ತು ನೀರಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಬೆಣ್ಣೆಥೋರಾ ಸೇರಿದಂತೆ ಹಲವಾರು ತಗ್ಗು ಪ್ರದೇಶದ ಹಳ್ಳಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಅಪಾಯಕ್ಕೆ ಸಿಲುಕಿವೆ. ನೆರೆ ಪೀಡಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲು ಮತ್ತು ರಕ್ಷಣಾ ಹಾಗೂ ಪರಿಹಾರ ಕಾರ್ಯದ ಮೇಲುಸ್ತುವಾರಿ ವಹಿಸುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕಲಬುರಗಿ ಜಿಲ್ಲಾಧಿಕಾರಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.
ಪ್ರತಿಕ್ರಿಯೆ ನೇರ ಮತ್ತು ವೈಯಕ್ತಿಕವಾಗಿರಬೇಕು ಎಂದು ಒತ್ತಿ ಹೇಳಿದ ಅವರು, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಒ) ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ, ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಮತ್ತು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಮಾನವ, ಜಾನುವಾರು ಮತ್ತು ಪ್ರಾಣಿಗಳ ಜೀವ ನಷ್ಟವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಂತ್ರಸ್ತ ಜನರಿಗೆ ಪರಿಹಾರ ಕೇಂದ್ರಗಳನ್ನು ವ್ಯವಸ್ಥೆ ಮಾಡಬೇಕು ಮತ್ತು ಪ್ರಾಣಿಗಳಿಗೆ ಸಾಕಷ್ಟು ಮೇವು ಒದಗಿಸಬೇಕು ಎಂದು ಸೂಚಿಸಿದ್ದಾರೆ.