ಬೆಂಗಳೂರು, : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯಡಿ 500ನೇ ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣದ ಸಂಭ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುತಿಸಿ, ಇಂದು ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟ್ ವಿತರಿಸಿದರು. ಈ ಯಶಸ್ಸು ಮಹಿಳಾ ಸಬಲೀಕರಣದ ದೃಷ್ಟಿಯಿಂದ ದೊಡ್ಡ ಮೈಲುಗಲ್ಲಾಗಿದ್ದು, ದೇಶದಾದ್ಯಾಂತ ಪ್ರಶಂಸೆ ಪಡೆಯುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2023ರ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಲಾಗಿದ್ದ ಐದು ಮಹತ್ವದ ಗ್ಯಾರಂಟಿ ಯೋಜನೆಗಳನ್ನೊಂದಾಗಿ ಶಕ್ತಿ ಯೋಜನೆಯೂ ಇದ್ದದ್ದು ಎಂದು ನೆನಪಿಸಿದರು. 2023ರ ಮೇ 20ರಂದು ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಜೂನ್ 11 ರಂದು ಶಕ್ತಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು. “ಈ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದ್ದು, ಇದರಿಂದ ಲಕ್ಷಾಂತರ ಮಹಿಳೆಯರು ಪ್ರತಿದಿನ ಲಾಭ ಪಡೆಯುತ್ತಿದ್ದಾರೆ,” ಎಂದು ಅವರು ಹೇಳಿದರು.
ಸಿಗಂದೂರಿನಲ್ಲಿ ಶಿಷ್ಠಾಚಾರ ಉಲ್ಲಂಘನೆ ವಿವಾದ: ಮತ್ತೊಂದೆಡೆ, ಸಾಗರ ತಾಲ್ಲೂಕಿನಲ್ಲಿ ನಡೆಯಬೇಕಿದ್ದ ಸಿಗಂದೂರು ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕಾರ್ಯಕ್ರಮ ಮುಂದೂಡುವಂತೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು. “ಅವರು ಒಪ್ಪಿಕೊಂಡಿದ್ದರು. ಆದರೆ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತರುವುದಕ್ಕಿಂತ ಮೊದಲು ಈ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸರಿಯಾದ ಶಿಷ್ಟಾಚಾರ ಮಾಹಿತಿ ನೀಡದಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, “ಇದು ಸರಕಾರದ ಅಧೀನದಲ್ಲಿನ ಯೋಜನೆಗೆ ಸಂಬಂಧಪಟ್ಟ ಕಾರ್ಯಕ್ರಮವಾಗಿದ್ದು, ಕೇಂದ್ರ-ರಾಜ್ಯ ಸರ್ಕಾರದ ಸಮನ್ವಯದ ಅಗತ್ಯವಿದೆ. ನಾವು ಯಾವಾಗಲೂ ಶಿಷ್ಠಾಚಾರವನ್ನು ಪಾಲಿಸುತ್ತೇವೆ. ಆದರೆ ಈ ಕಾರ್ಯಕ್ರಮಕ್ಕೆ ನಮ್ಮ ಯಾರಿಗೂ ಆಹ್ವಾನ ನೀಡಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಮುಂದುವರೆದು ಹೇಳಿದರು, “ಈ ಘಟನೆಯ ವಿರುದ್ಧವಾಗಿ, ಇಂದಿನ ಸಾಗರ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ಶಿಷ್ಟಾಚಾರ ಉಲ್ಲಂಘನೆಯ ಮೂಲಕ ಕೇಂದ್ರವೇ ತಿಕ್ಕಾಟ ಆರಂಭಿಸಿದೆ.”
ಒಂದೆಡೆ ಶಕ್ತಿ ಯೋಜನೆಯ 500 ಕೋಟಿ ಪ್ರಯಾಣಗಳ ಸಂಭ್ರಮ, ಮತ್ತೊಂದೆಡೆ ಸಿಗಂದೂರಿನ ಕಾರ್ಯಕ್ರಮದಲ್ಲಿ ಶಿಷ್ಠಾಚಾರದ ಲೋಪ ಎಂಬ ಎರಡು ಪ್ರಮುಖ ಸಂಗತಿಗಳು ಇಂದು ರಾಜ್ಯ ರಾಜಕೀಯದಲ್ಲೂ ಮತ್ತು ಸಾರ್ವಜನಿಕ ಗಮನದಲ್ಲೂ ಕೇಂದ್ರಬಿಂದುವಾಗಿವೆ. ಮಹಿಳಾ ಸಮುದಾಯಕ್ಕಾಗಿ ಶಕ್ತಿ ಯೋಜನೆ ಭವಿಷ್ಯದಲ್ಲಿ ಮತ್ತಷ್ಟು ವಿಸ್ತಾರ ಹೊಂದಲಿರುವ ನಿರೀಕ್ಷೆಯಿದ್ದು, ಕೇಂದ್ರ-ರಾಜ್ಯ ಸಂಬಂಧಗಳಲ್ಲಿ ಸಾಮರಸ್ಯ ಅಗತ್ಯ ಎಂಬುದನ್ನು ಸಿಎಂ ಸ್ಪಷ್ಟಪಡಿಸಿದ್ದಾರೆ.