ಬೆಂಗಳೂರು: ಬಾಬು ಜಗಜೀವನ್‌ರಾಮ್ ಅವರನ್ನು ಇಡೀ ದೇಶ ಸ್ಮರಿಸುತ್ತದೆ. ಅವರ ಸಾಧನೆಯ ಹೆಜ್ಜೆಗಳನ್ನು ಸ್ಮರಿಸುವ ದಿನ ಇವತ್ತು. ೪೦ ವರ್ಷಗಳ ಕಾಲ ರಾಷ್ಟ್ರ ರಾಜಕಾರಣಲ್ಲಿ ಇದ್ದು ಮಹತ್ತರ ಸಾಧನೆ ಮಾಡಿ ಹೋಗಿದ್ದಾರೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧ ಆವರಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ದಿ.ಡಾ.ಬಾಬು ಜಗಜೀವನ್‌ರಾಮ್ ಅವರ ಪುಣ್ಯತಿಥಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಭಾರತ್ ಅಕ್ಕಿಯನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಸೆಳೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಈಗ ಚುನಾವಣೆ ಮುಗಿದಿದೆ. ಭಾರತ್ ಅಕ್ಕಿಯೂ ನಿಂತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಮ್ಮ ಸರ್ಕಾರ ರಚನೆಯಾದ ಮೇಲಂತೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡುವುದು ನಿಲ್ಲಿಸಿದೆ. ಅದು ರಾಜಕೀಯ ದುರುದ್ದೇಶದಿಂದ ಎಂಬುದು ಸ್ಪಷ್ಟ. ಅಕ್ಕಿ ಇಲ್ಲದೇ ಇದ್ದರೆ ಪರವಾಗಿಲ್ಲ. ಅಕ್ಕಿ ದಾಸ್ತಾನು ಇದ್ದರೂ ಕೇಂದ್ರ ನಮಗೆ ಅಕ್ಕಿ ಕೊಡಲಿಲ್ಲ. ಹೀಗಾಗಿ ನಾವು ಹಣ ನೀಡಬೇಕಾಯಿತು ಎಂದರು.