ವರದಿ: ಸ್ಟೀಫನ್ ಜೇಮ್ಸ್
ಉತ್ತರ ಕರ್ನಾಟಕ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಗೆ, ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಸೆಪ್ಟೆಂಬರ್ 30ರ ಮಂಗಳವಾರ, ವಿಜಯಪುರ, ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ, ಮಳೆ ಹಾನಿ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಲಿದ್ದಾರೆ.
ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ, ಕಲಬುರಗಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಿಜಯಪುರ, ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಮಧ್ಯಾಹ್ನ 2 ಗಂಟೆ ವೇಳೆಗೆ ಸಮೀಕ್ಷೆ ಪೂರ್ಣಗೊಳಿಸಿ, ಕಲಬುರಗಿ ನಗರದ ಐವಾನ್-ಇ-ಷಾಹಿ ವಸತಿ ಗೃಹಕ್ಕೆ ಆಗಮಿಸಲಿದ್ದಾರೆ. ಭೋಜನ ವಿರಾಮದ ಬಳಿಕ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ, ನಾಲ್ಕೂ ಜಿಲ್ಲೆಗಳಲ್ಲಿ ಮಳೆಹಾನಿ ಪ್ರದೇಶಗಳಲ್ಲಿ ಕೈಗೊಂಡಿರುವ, ಪರಿಹಾರ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಳೆ ಹಾನಿ ಪರಿಹಾರ ಕುರಿತು ಮಾಹಿತಿ ನೀಡಲಿದ್ದಾರೆ.
ಕಳೆದೆರಡು ದಿನಗಳಿಗೆ ಹೋಲಿಸಿದರೆ ನೆರೆಯ ಮಹಾರಾಷ್ಟ್ರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಮತ್ತು ನೆರೆ ಕಡಿಮೆಯಾಗಿದೆ. ಆದರೆ, ಜನರ ಬವಣೆ ಮಾತ್ರ ಕಡಿಮೆಯಾಗಿಲ್ಲ. ಕಲ್ಯಾಣ ಕರ್ನಾಟಕದ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್ ಹಾಗೂ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಹಪೀಡಿತ ಜನರ ಸಂಕಷ್ಟ ಮುಂದುವರಿದೆ.
ಭೀಮಾ ನದಿಯ ಒಳಹರಿವು 5.10 ಲಕ್ಷ ಕ್ಯೂಸೆಕ್‌ನಿಂದ 4.75 ಲಕ್ಷ ಕ್ಯೂಸೆಕ್‌ಗೆ ಇಳಿದಿದ್ದರೂ, ಭೀಮಾ ತೀರದ ಗ್ರಾಮಗಳಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ಸುರಕ್ಷಿತ ಸ್ಥಳಗಳಿಗೆ ಜನರನ್ನು ಕಳುಹಿಸುವ ಕೆಲಸ ಈಗಲೂ ಮುಂದುವರಿದಿದೆ.
ಅನೇಕ ಮನೆಗಳು ಭಾಗಶಃ ನೀರಲ್ಲಿ ಮುಳುಗಿದ್ದರಿಂದ ಹಾಗೂ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ, ಕೆಲವರು ಮನೆ ಮಾಳಿಗೆ ಮೇಲೆ ಕಾಲ ಕಳೆಯುತ್ತಿದ್ದಾರೆ. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹೆಚ್ಚಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಸಿಬ್ಬಂದಿ, ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿದ್ದಾರೆ.