Wednesday, December 3, 2025
Google search engine

Homeರಾಜಕೀಯಸಿಎಂ ಕುರ್ಚಿ ಖಾಲಿ ಇಲ್ಲ : ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಎಂ.ಬಿ.ಪಾಟೀಲ್‌ ತಿರುಗೇಟು

ಸಿಎಂ ಕುರ್ಚಿ ಖಾಲಿ ಇಲ್ಲ : ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಎಂ.ಬಿ.ಪಾಟೀಲ್‌ ತಿರುಗೇಟು

ಬೆಂಗಳೂರು:  ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದು ಪಕ್ಕಾ ಎಂದು ಆಪ್ತ ಬಣದಲ್ಲಿರುವ ಸತೀಶ್‌ ಜಾರಕಿಹೊಳಿ ಅವರೇ ಹೇಳಿದ ಹೊರತಾಗಿಯೂ, ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಅಪ್ಪಸ್ವರ ತೆಗೆದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಗ್ಗೆ ಸತೀಶ್‌ ಜಾರಕಿಹೊಳಿ ಹೇಳಿರಬಹುದು. ಆದರೆ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ವ್ಯತಿರಿಕ್ತವಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಎರಡು ಬಾರಿ ಉಪಾಹಾರಕೂಟ ನಡೆಸಿದ್ದು, ಅಲ್ಲಿಗೆ ಎಲ್ಲವೂ ಬಗೆಹರಿದಿದೆ. ಕಾಂಗ್ರೆಸ್‌‍ ಶಾಸಕರು ದೆಹಲಿಗೆ ಭೇಟಿ ನೀಡಿದ್ದು ಸಚಿವ ಸ್ಥಾನ ಕೇಳಲಿಕ್ಕಾಗಿ. ಅದನ್ನು ನಾಯಕತ್ವ ಬದಲಾವಣೆಗಾಗಿ ನಡೆದ ಯಾತ್ರೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಎಲ್ಲಾ ರಾಜಕೀಯ ಗೊಂದಲಗಳು ಮಾಧ್ಯಮಗಳ ಸೃಷ್ಟಿಯಾಗಿದೆ ಹೊರತು ಬೇರಿನಿಲ್ಲ ಎಂದು ಆರೋಪಿಸಿದ್ದಾರೆ.

ಗೃಹಸಚಿವ ಡಾ.ಜಿ.ಪರಮೇಶ್ವರ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಭೆ ನಡೆಸಿರುವುದರಲ್ಲಿ ತಪ್ಪೇನೂ ಇಲ್ಲ. ನಾನು ಮತ್ತು ಸತೀಶ್‌ ಜಾರಕಿಹೊಳಿ ಹಾಗೂ ಪರಮೇಶ್ವರ್‌ ಹಲವಾರು ಬಾರಿ ಸಭೆ ನಡೆಸಿದ್ದೇವೆ. ನಿನ್ನೆ ಮುಖ್ಯಮಂತ್ರಿ ಅವರನ್ನು ನಾನು ಭೇಟಿ ಮಾಡಿದ್ದೆ. ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿ ಕೆಲಸ ಇದೆ. ಅವರ ಭೇಟಿಗೆ ಪ್ರಯತ್ನಿಸುತ್ತಿದ್ದೇನೆ ಎಂದರು. ಅಧಿಕಾರ ಬಿಟ್ಟು ಕೊಡುವ ಬಗ್ಗೆ ಸಿದ್ದರಾಮಯ್ಯ ಮಾತು ಕೊಟ್ಟಿರುವ ಕುರಿತು ತಮಗೆ ಮಾಹಿತಿ ಇಲ್ಲ. ಹೈಕಮಾಂಡ್‌ ನಾಯಕರೇ ಈ ಬಗ್ಗೆ ಹೇಳಿಕೆ ನೀಡಬೇಕು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಯಂತೂ ಸದ್ಯಕ್ಕೆ ಖಾಲಿ ಇಲ್ಲ. ಜನವರಿ ವೇಳೆಗೆ ನಾಯಕತ್ವ ಬದಲಾವಣೆಯಾಗಲಿದೆ ಎಂಬುದು ಮಾಧ್ಯಮಗಳ ಊಹೆ. ನಮಲ್ಲಿ ಅಂತಹ ಚರ್ಚೆಗಳು ನಡೆದಿಲ್ಲ. ನಮಲ್ಲಿ ಶಾಸಕರು, ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲರೂ ಒಟ್ಟಾಗಿದ್ದೇವೆ ಎಂದರು. ಮುಖ್ಯಮಂತ್ರಿ ಹುದ್ದೆಗೆ ತಾವು ಆಕಾಂಕ್ಷಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಪುನರುಚ್ಚರಿಸಿದರು.

ಇತ್ತ ಮನೆ ಎಂದ ಮೇಲೆ ಸಣ್ಣ ಗೊಂದಲಗಳು ಸಹಜ. ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಬಿಜೆಪಿಯಲ್ಲಿ ವಿಜಯೇಂದ್ರ, ಆರ್‌.ಅಶೋಕ್‌, ವಿ.ಸೋಮಣ್ಣ, ರಮೇಶ್‌ ಜಾರಕಿಹೊಳಿ, ಡಾ.ಸಿ.ಎನ್‌ ಅಶ್ವಥ್ ನಾರಾಯಣ, ಪ್ರಹ್ಲಾದ್‌ ಜೋಷಿ ಸೇರಿದಂತೆ 20ಕ್ಕೂ ಹೆಚ್ಚು ಬಾಗಿಲುಗಳಿವೆ. ಒಮ್ಮ ಅದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಹಾಗೂ ಕಾಂಗ್ರೆಸ್‌‍ ಪಕ್ಷದಲ್ಲಿ ಲಿಂಗಾಯತ, ಒಕ್ಕಲಿಗ, ಅಹಿಂದ ಎಂಬ ಚರ್ಚೆಗಳಿಲ್ಲ. ಕಾಂಗ್ರೆಸ್‌‍ ಸಮುದಾಯವೇ ಒಂದು ವರ್ಗ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್‌‍ ಹೈಕಮಾಂಡ್‌ ಬಲಿಷ್ಠವಾಗಿದೆ. ಕಾಲಕಾಲಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜಕೀಯದ ಎಲ್ಲಾ ಬೆಳವಣಿಗೆಗಳ ಮೇಲೂ ನಿಗಾ ಇಟ್ಟಿದೆ. ರಾಜಕೀಯ ಶಾಶ್ವತ ಅಲ್ಲ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿ ಇದೆ. ಜೀವವೇ ಶಾಶ್ವತ ಅಲ್ಲ ಅಲ್ಲವೇ ಎಂದು ಮರು ಪ್ರಶ್ನಿಸಿದ್ದಾರೆ.

RELATED ARTICLES
- Advertisment -
Google search engine

Most Popular