ಬೆಂಗಳೂರು: ಸಿಎಂ ಸ್ಥಾನ ಅಷ್ಟು ಸುಲಭವಾಗಿ ಸಿಗುವ ಹುದ್ದೆ ಅಲ್ಲ. ಆದರೆ ನಮ್ಮ ಗುರಿ 2028ರ ವಿಧಾನಸಭೆ ಚುನಾವಣೆಯಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದು, ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಮೊದಲಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಹಿತದೃಷ್ಟಿಯಿಂದ ಶಾಸಕರ ಹಿತದೃಷ್ಟಿಯಿಂದ ಎಲ್ಲಾವನ್ನೂ ತಾಳ್ಮೆಯಿಂದ ನಡೆಸುತ್ತಿದ್ದಾರೆ ಎಂದರು.
ಮುಂದುವರೆದು ಪಕ್ಷದ ಆದೇಶಕ್ಕೋಸ್ಕರ ಡಿಕೆಶಿ ಕಾಯುತ್ತಿದ್ದಾರೆ. ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರುವುದಿಲ್ಲ. ಅಷ್ಟು ಸುಲಭವಾಗಿ ಸಿಗುವ ಹುದ್ದೆ ಅಲ್ಲ ಸಿಎಂ ಸ್ಥಾನ. ನಮ್ಮ ಗುರಿ ಇರುವುದು 2028 ರ ಚುನಾವಣೆ ಎಂದರು.
ಇನ್ನೂ ನಾಯಕತ್ವ ಬದಲಾವಣೆ ವಿಚಾರವಾಗಿ ತಾಳ್ಮೆಯಿಂದ ಇರಿ ಎಂದು ಪಕ್ಷ ಈಗಾಗಲೇ ಹೇಳಿದೆ. ರಾಹುಲ್ ಗಾಂಧಿ ಅವರನ್ನ ಮೈಸೂರಿನಲ್ಲಿ ಡಿಕೆಶಿ ಭೇಟಿಯಾದಾಗ, ಸೂಕ್ತ ಸಂದರ್ಭದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ, ಶಾಸಕರು ಹಿತದೃಷ್ಟಿಯಿಂದ ಕಾಯುತ್ತಿದ್ದೇವೆ. ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರೋದಿಲ್ಲ. ನಮ್ಮ ಅಣ್ಣನ ಹಣೆ ಬರಹದಲ್ಲಿ ಬರೆದಿದ್ದರೆ ಸಿಎಂ ಆಗ್ತಾರೆ ಎಂದರು.
ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರ ಎಲ್ಲಾ ದೃಷ್ಟಿಕೋನ ಇಟ್ಟುಕೊಂಡು ಚಿಂತನೆ ಮಾಡ್ತಾರೆ. ನಾನು ಶಿವಕುಮಾರ್ ದೃಷ್ಟಿಯಿಂದ ನೋಡ್ತೇನೆ. ಮಂತ್ರಿ ಆಗುವವರು ಅವರ ದೃಷ್ಟಿಯಿಂದ ನೋಡ್ತಾರೆ. ಚೇರ್ಮನ್ ಆಗುವವರು ಅವರ ದೃಷ್ಟಿಯಿಂದ ನೋಡ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವಾಗಿ ಮಾತನಾಡಿದ ಅವರು, ಅದನ್ನು ನಾನು ಸ್ವಾಗತ ಮಾಡುತ್ತೇನೆ. ನಾವು ಯಾರು ಹೋಗು ಎಂದಿಲ್ಲ. ಬರೋಕೆ ಬೇಡ ಎನ್ನಲ್ಲ. ಅವರ ಪಕ್ಷಕ್ಕೆ ಅವರೇ ಅಧಿಪತಿ. ಅದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಭೇಟಿ ಅವರ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮ್ಮ ಅವರ ಮಾತುಕತೆ ಅಷ್ಟೇ. ನಿಮಗೂ ಎಐಸಿಸಿ ಅಧ್ಯಕ್ಷರು ಹತ್ರನೇ ಇದ್ದಾರೆ. ನೀವೇ ಹೋಗಿ ಎಐಸಿಸಿ ಅಧ್ಯಕ್ಷರನ್ನ ಕೇಳಿ, ಮಲ್ಲಿಕಾರ್ಜುನ ಖರ್ಗೆ ನಮಗೆ ಹೊಸಬರಲ್ಲ ಎಂದರು.
ಜನವರಿ ಅಂತ್ಯಕ್ಕೆ ದೆಹಲಿಗೆ ಬುಲಾವ್ ಇದೆಯಾ ಎಂದು ಕೇಳಿದಾಗ 22ರಿಂದ ಅಧಿವೇಶನ ಪ್ರಾರಂಭಗೊಳ್ಳುತ್ತದೆ. ಅಧಿವೇಶನ ನಡೆಯುತ್ತಿರುವಾಗ ದೆಹಲಿಗೆ ಹೋಗುವುದು ಹೇಗೆ? ರಾಜಕಾರಣಿಗಳಿಗೆ ಬಿಡುವೇ ಇರಲ್ಲ. ರಾಜಕಾರಣಿಗಳಿಗೆ ನಿದ್ದೆ ಇರಲ್ಲ, ಊಟ ಇರಲ್ಲ, ನೆಮ್ಮದಿ ಇರಲ್ಲ. ಆದರೆ ಅಧಿಕಾರವೂ ಶಾಶ್ವತವಲ್ಲ, ತಾಳ್ಮೆಯೂ ಶಾಶ್ವತವಲ್ಲ ಎಂದು ಹೇಳಿದರು.



