ಕಾರವಾರ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ದಿ ಖಿನ್ನತೆಯಿಂದ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗದ ಯುವಕ, ಈ ಹಿಂದೆ ಝೀ ಕನ್ನಡದ ಕಾಮಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋ ಮೂಲಕ ರಾಜ್ಯಕ್ಕೆ ಪರಿಚಯವಾಗಿದ್ದರು.
ನಿನಾಸಂನಲ್ಲಿ ನಾಟಕ ತರಬೇತಿ ಪಡೆದಿದ್ದ ಈತ ಉತ್ತಮ ಯೋಗಪಟು ಕೂಡ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಂತರ ಧಾರವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತಿದ್ದ ಇವರಿಗೆ ಅವಕಾಶಗಳು ಹೆಚ್ಚು ಸಿಗಲಿಲ್ಲ. ಇದರಿಂದಾಗಿ ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ರಿಯಾಲಿಟಿ ಶೋನಿಂದ ಪ್ರಸಿದ್ಧರಾಗಿದ್ದ ಇವರು ಸಾಕಷ್ಟು ಅಭಿಮಾನಿಗಳನ್ನ ಸಹ ಹೊಂದಿದ್ದರು. ಆದರೆ, ಅವಕಾಶ ಸಿಗದೇ ಕೂಲಿ ಕೆಲಸ ಮಾಡುತಿದ್ದರು.
ಖಿನ್ನತೆಗೊಳಗಾಗಿ ಇವರು, ‘ಕಳೆದ ಮೂರು ತಿಂಗಳ ಹಿಂದೆ ನನ್ನ ಬಗ್ಗೆ ಜನ ಆಡಿಕೊಳ್ಳುತ್ತಾರೆ, ಟಾರ್ಗೆಟ್ ಮಾಡುತ್ತಾರೆ, ಜೀವನ ಬೇಡ ಅನಿಸುತ್ತಿದೆ’ ಎಂದು ಹೇಳಿಕೊಂಡಿದ್ದರು. ಕ್ರಿಮ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ಪತ್ನಿ ಜೊತೆ ಮನೆಯೊಂದಕ್ಕೆ ಕೆಲಸಕ್ಕಾಗಿ ತೆರಳಿದಾಗ ಅರಣ್ಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.