ಮಂಡ್ಯ : ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಒದಗಿಸುವುದು ಕೇವಲ ಚುನಾವಣೆ ಆದ್ಯತೆ ಆಗಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಸಾಯಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್, ನಾಡಪ್ರಭು ಕೆಂಪೇಗೌಡ, ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಅವರ ನೂತನ ಪಂಚರತ್ನ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಐವರು ಮಹನೀಯರ ಇತಿಹಾಸ ನಮಗೆಲ್ಲಾ ದಾರಿದೀಪವಾಗಿದ್ದು, ಸಾಧನೆಯ ಹಾದಿಯಲ್ಲಿ ಸಾಗುವುದು ಮುಖ್ಯವಾಗಬೇಕು. ಇವರ ಕುರಿತು ಯುವಜನರು ಅಧ್ಯಯನ ನಡೆಸಬೇಕು. ಮಂಡ್ಯದ ದೇಶಕ್ಕೆ ಮಾದರಿಯಾಗಿರುವ ಮಹನೀಯರ ಆದರ್ಶಗಳು ಪ್ರಸ್ತುತವಾಗಿವೆ ಎಂದರು.
ಮುಂದುವರೆದು, ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಕೇವಲ ಚುನಾವಣಾ ಆದ್ಯತೆಯಾಗಬಾರದು. ಅದು ಪ್ರತಿಯೊಬ್ಬ ಜನಪ್ರತಿನಿಧಿಯ ಬದ್ಧತೆ ಮತ್ತು ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ಪೂರ್ಣಕುಂಭ ಹಾಗೂ ಕಲಾತಂಡಗೊಳೊಂದಿಗೆ ವೇದಿಕೆಗೆ ಕರೆದೊಯ್ಯಲಾಯಿತು. ಮುಖಂಡರಾದ ಸಿದ್ದರಾಮಯ್ಯ, ಇಂಡುವಾಳು ಸಚ್ಚಿದಾನಂದ, ಸಿ.ಟಿ.ಮಂಜುನಾಥ್, ಬಿ.ಕೆ.ಸತೀಶ್ಚಂದ್ರ, ಬಿ.ಡಿ.ಪುಟ್ಟಸ್ವಾಮಿ, ಬಿ.ಸಿ.ಸತೀಶ್, ಬಿ.ಸಿ.ಮಾಯಿಗಯ್ಯ, ಯಜಮಾನ್ ಚಿಕ್ಕಶಿವಪ್ಪ, ಚಿಕ್ಕರಾಮಣ್ಣ, ಶ್ರೀನಿವಾಸ್, ಬೊಮ್ಮೇಶ್, ಸರ್ವೇಶ್ ಭಾಗವಹಿಸಿದ್ದರು.



