ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಚುನಾಯಿತ ಸದಸ್ಯರು ತಮಗೆ ಸಿಕ್ಕ ಅಧಿಕಾರವಧಿಯಲ್ಲಿ ಜನತೆಗೆ ಉಪಯುಕ್ತವಾದ ಶಾಶ್ವತ ಕೆಲಸಗಳನ್ನು ಮಾಡಬೇಕು. ಇಂತಹ ಕೆಲಸ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೆ.ಆರ್.ನಗರ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಂತಹ ಹೆಚ್.ವಿಶ್ವನಾಥ್‌ರವರು ಸಚಿವರಾಗಿದ್ದಾಗ ಅಕ್ಷರ ದಾಸೋಹ, ಯಶಸ್ವಿನಿ ಮತ್ತು ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳನ್ನು ಆರಂಭಿಸಿ ಶಾಶ್ವತವಾದ ಕೆಲಸ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನತೆಯ ಆರ್ಥಿಕಾಭಿವೃದ್ಧಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಾನು ನಡೆದುಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನ ಮಾಡಲು ಪ್ರಯತ್ನಿಸುತ್ತಿರುವುದರ ಜತೆಗೆ ಜನತೆಗೆ ಉಪಯುಕ್ತವಾದ ಕೆಲಸಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ ಶಾಶಕರ ನಿಧಿಯಿಂದ ಅನುದಾನ ನೀಡುವುದರ ಜತೆಗೆ ಭವನ ಉದ್ಘಾಟನೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದ ಶಾಸಕ ಡಿ.ರವಿಶಂಕರ್ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲೂ ಅಲ್ಲಿನ ಅಧ್ಯಕ್ಷ ಅಣ್ಣೇಗೌಡರ ನೇತೃತ್ವದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ವಿಧಾನಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಕಟ್ಟಡ ನಿರ್ಮಾಣಕ್ಕೆ ಐದು ಲಕ್ಷ ಅನುದಾನ ನೀಡುವ ಭರವಸೆ ನೀಡಿದರು. ಮೈಸೂರು-ಹಾಸನ ಮುಖ್ಯ ರಸ್ತೆಯ ಕಟ್ಟಡವೊಂದರಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ ಮತ್ತು ಕೆನಾ ಬ್ಯಾಂಕು ಇರುವುದರಿಂದ ಜನದಟ್ಟಣೆ ಮತ್ತು ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಅಪಘಾತಗಳು ಸಂಭಿವಿಸುವ ಸಾಧ್ಯತೆಯಿರುವುದರಿಂದ ಶಾಸಕರು ಇವೆರೆಡನ್ನೂ ಸ್ಥಳಾಂತರಿಸಬೇಕೆAದು ಸಲಹೆ ನೀಡಿದರು.
ಎಪಿಎಂಸಿ ಆವರಣದಲ್ಲಿ ಸಾಕಷ್ಟು ಖಾಲಿ ಕಟ್ಟಡಗಳು ಮತ್ತು ಸ್ಥಳಾವಕಾಶವಿರುವುದರಿಂದ ಬ್ಯಾಂಕು ಮತ್ತು ಉಪನೊಂದಣಾಧಿಕಾರಿಗಳ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಿದರೆ ಎಪಿಎಂಸಿಗೆ ಲಾಭವಾಗಲಿದೆ. ಆದ್ದರಿಂದ ಈ ವಿಚಾರವನ್ನು ಶಾಸಕರು ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದರು.
ಸರ್ಕಾರಿ ಆಸ್ತಿಗಳಿಗೆ ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿ ತಡೆಗೋಡೆ ನಿರ್ಮಾಣ ಮಾಡುತ್ತಿರುವುದು ಹಾಗೂ ಸರ್ಕಾರಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶಿಸುತ್ತಿರುವುದು ಹೆಚ್ಚಾಗಿ ಕಂಡು ಬಂದಿದ್ದು, ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡಬೇಕಾದುದು ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ಶಾಸಕರು ಸಭೆ ನಡೆಸಿ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಡಿ.ಶಿವುನಾಯಕ್, ಸದಸ್ಯ ಸೈಯದ್‌ಸಿದ್ದಿಕ್, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್.ಮಂಜುನಾಥಗೌಡ, ಮಾಜಿ ಅಧ್ಯಕ್ಷ ವಡಗೂರುನಾಗರಾಜು, ರಾಜ್ಯ ಕಾನೂನು ಉಪಸಮಿತಿ ಅಧ್ಯಕ್ಷ ಕೆ.ಆರ್.ನಟರಾಜು, ಜಿಲ್ಲಾಧ್ಯಕ್ಷ ಕಲ್ಮಳ್ಳಿಶಿವಕುಮಾರ್, ತಾಲೂಕು ಅಧ್ಯಕ್ಷ ಡಿ.ಎಸ್.ದಿವಾಕರ್, ನಿರ್ದೇಶಕರಾದ ಸಿ.ವಿ.ಶಿವಪ್ಪಾಜಿ, ಡಿ.ಆರ್.ರಾಹುಲ್, ಹೆಚ್.ಎಸ್.ಸುಬ್ಬೇಗೌಡ, ಗುರುಪ್ರಸಾದ್, ಜಿ.ಟಿ.ಪುಟ್ಟೇಗೌಡ, ಹೆಚ್.ಆರ್.ರಮೇಶ್, ಸಿ.ಕೆ.ರಾಜಲಕ್ಷಿö್ಮ, ಡಿ.ಎಂ.ಬೀರೇಶ್, ಪದನಿಮಿತ್ತ ಕಾರ್ಯದರ್ಶಿ ಕೆ.ಜೆ.ಮಲ್ಲಿಕಾರ್ಜುನ್, ಎಪಿಎಂಸಿ ಕಾರ್ಯದರ್ಶಿ ಮಹೇಶ್ ಹಾಜರಿದ್ದರು.