ಕೆ.ಆರ್.ಪೇಟೆ : ಫೆ.೧೦ರಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಜನತಾ ದರ್ಶನ ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್ ತಿಳಿಸಿದರು.
ತಾಲ್ಲೂಕಿನ ಭಾರತೀಪುರ, ಅಘಾಲಯ, ಲಕ್ಷ್ಮೀಪುರ, ಐಕನಹಳ್ಳಿ, ಮಾದಾಪುರ, ದಬ್ಬೇಘಟ್ಟ, ಆನೆಗೊಳ, ಕಿಕ್ಕೇರಿ ಮತ್ತಿತರರ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಪಕ್ಷವು ನೀಡಿದ ೫ ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಕೇವಲ ೮ ತಿಂಗಳಲ್ಲಿ ಈಡೇರಿಸಿದೆ. ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ ಗ್ಯಾರಂಟಿ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಯೋಜನೆಗಳ ಫಲಾನುಭವಿಗಳನ್ನು ಬೇಟಿ ಮಾಡಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಹಾಗೂ ಹಿಂದಿನ ಸರ್ಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈ ಸೋಲನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಕೊಡಿಸಿ ಗೆಲ್ಲಿಸುವ ಮೂಲಕ ವಿಧಾನಸಭಾ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಅವಕಾಶ ಒದಗಿ ಬಂದಿದೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಕಾಂಗ್ರೆಸ್ ಮುಖಂಡರುಗಳಾದ ಎಂ.ಡಿ.ಕೃಷ್ಣಮೂರ್ತಿ, ಬಿ.ಎಲ್.ದೇವರಾಜು, ಕೋಡಿಮಾರನಹಳ್ಳಿ ದೇವರಾಜು, ವಿ.ಮಂಜೇಗೌಡ, ಎಲ್.ಕೆ.ಮಂಜುನಾಥ್, ಸಾಸಲು ಈರಪ್ಪ, ರಾಜಯ್ಯ, ಬಸ್ತಿ ರಂಗಪ್ಪ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್, ವಿಜಯ್ ಕುಮಾರ್, ಅಣ್ಣೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮೀಪುರ ಚಂದ್ರೇಗೌಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ.ರಾಮಕೃಷ್ಣೇಗೌಡ, ತಾ.ಪಂ.ಮಾಜಿ ಸದಸ್ಯ ಶ್ಯಾಮಣ್ಣ, ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಕೃಷ್ಣ , ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಶಾಂಭವಿ, ಜಿಲ್ಲಾ ಸೋನಿಯಾ ಬ್ರಿಗೇಡ್ ಅಧ್ಯಕ್ಷ ವೀಣಾ ಶಂಕರ್, ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರುಗಳಾದ ಕೆ.ಬಿ.ಪ್ರತಿಮಾ, ಆದಿಹಳ್ಳಿಮೀನಾಕ್ಷಿ , ತಾಲ್ಲೂಕು ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶಿವಮ್ಮ, ಯುವ ನಾಯಕ ಆಕಾಶ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.