ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದ (ಇ.ಡಿ) ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆದ ಗದ್ದಲ ಮತ್ತು ಅವ್ಯವಸ್ಥೆಯ ಬಗ್ಗೆ ಸಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಅಲ್ಲದೆ ಭಾವನೆಗಳು ಹದ್ದುಮೀರಬಾರದು ಎಂದು ಎಚ್ಚರಿಸಿದೆ.
ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ವಿರುದ್ಧದ ಇಡಿ ತನಿಖೆಗೆ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ನಡೆಯಿತು. ಟಿಎಂಸಿ ಪಕ್ಷದೊಂದಿಗೆ ಕೆಲಸ ಮಾಡುವ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿಗಳ ಮೇಲೆ ಕೆಲ ದಿನಗಳ ಹಿಂದೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಮಮತಾ ಬ್ಯಾನರ್ಜಿ ಅವರು ಐ-ಪ್ಯಾಕ್ ಸಹ ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಿಂದ ಸಾಕ್ಷ್ಯಗಳನ್ನು ಕದ್ದಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಆರೋಪ ಮಾಡಿದ್ದರು.
ಇನ್ನೂ ಜನವರಿ 9 ರಂದು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವಾಗ, ಪ್ರಕರಣಕ್ಕೆ ಸಂಬಂಧವಿಲ್ಲದ ವಕೀಲರ ದಂಡೇ ಅಲ್ಲಿ ಜಮಾಯಿಸಿತ್ತು. ವಾಟ್ಸಾಪ್ ಸಂದೇಶದ ಮೂಲಕ ವಕೀಲರನ್ನು ಕರೆಯಿಸಿ ನ್ಯಾಯಾಲಯದಲ್ಲಿ ಗದ್ದಲ ಉಂಟಾಗಿತ್ತು. ಇದರಿಂದ ಬೇಸತ್ತ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಬೇಕಾಯಿತು. ಇದನ್ನು ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ;ಮಾಬಾಕ್ರಸಿ’ ಅಥವಾ ಗುಂಪುಗಾರಿಕೆಯ ದರ್ಬಾರ್ ಎಂದು ಬಣ್ಣಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪ್ರಶಾಂತ್ ಮಿಶ್ರಾ ಮತ್ತು ವಿಪುಲ್ ಪಂಚೋಲಿ ಅವರ ಪೀಠ, ಹೈಕೋರ್ಟ್ ಅನ್ನು ಜಂತರ್ ಮಂತರ್ ಆಗಿ ಪರಿವರ್ತಿಸಲಾಗಿದೆಯೇ?ಎಂದು ಖಾರವಾಗಿ ಪ್ರಶ್ನಿಸಿತು. ಅಲ್ಲದೆ, ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಮತ್ತು ಇತರ ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಮೆಹ್ತಾ ಒತ್ತಾಯಿಸಿದರು.
ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಕೆಲವೊಮ್ಮೆ ಭಾವನೆಗಳು ಹದ್ದುಮೀರುತ್ತವೆ, ಜನವರಿ 9 ರಂದು ನಡೆದ ಘಟನೆ ದುರದೃಷ್ಟಕರ, ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಪೀಠ, ಭಾವನೆಗಳು ಪದೇ ಪದೇ ಹದ್ದುಮೀರಬಾರದು ಎಂದು ಎಚ್ಚರಿಸಿತು.
ಈ ವಿಷಯವು ಗಂಭೀರವಾಗಿದ್ದು, ನೋಟಿಸ್ ಜಾರಿ ಮಾಡಲು ಉದ್ದೇಶಿಸಿರುವುದಾಗಿ ಕೋರ್ಟ್ ತಿಳಿಸಿದೆ. ಇ.ಡಿ ಯಾವುದೇ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳಿದ ನಂತರ ಹೈಕೋರ್ಟ್ ಟಿಎಂಸಿ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ಮಮತಾ ಬ್ಯಾನರ್ಜಿ ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬ ಆರೋಪ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.



