ಹೊಸದಿಲ್ಲಿ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಪಕ್ಷದ ಸ್ಥಾನಮಾನ ಅತ್ಯಂತ ಮಹತ್ವದ್ದಾಗಿರುತ್ತದೆ. ಸರ್ಕಾರದ ವಿರುದ್ಧದ ರಚನಾತ್ಮಕ ಟೀಕೆಗಳು, ಪ್ರಜಾತಂತ್ರ ವ್ಯವಸ್ಥೆಯನ್ನು ಸರಿಯಾದ ಹಳಿಯ ಮೇಲೆ ಓಡುವಂತೆ ಮಾಡುತ್ತವೆ. ಕೆಲವೊಮ್ಮೆ, ಈ ಟೀಕೆಗಳು ವೈಯಕ್ತಿಕ ಮಟ್ಟಕ್ಕೆ ಇಳಿದಾಗ, ಪ್ರತಿಪಕ್ಷದ ಸ್ಥಾನಮಾನ ಕುಸಿಯುತ್ತಾ ಸಾಗುತ್ತದೆ. ಬಿಹಾರ ವಿಧಾನಸಭೆ ಚುನಾವಣೆ ವೇಳೆ, ಪ್ರಧಾನಿ ನರೇಂದ್ರ ಮೋದಿ ಜಹಾ ಮಾರುತ್ತಿರುವ ಎಐ ವಿಡಿಯೋ ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ಪಾಟ್ನಾ ಹೈಕೋರ್ಟ್ ಆದೇಶದ ಬಳಿಕ ಹಿಂಪಡೆದಿತ್ತು. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ, ಈ ವಿವಾದಾತ್ಮಕ ಎಐ ವಿಡಿಯೋ ಕಾರಣವಾಗಿತ್ತು. ಆದರೆ ಈ ತಪ್ಪಿನಿಂದ ಕಾಂಗ್ರೆಸ್ ಪಾಠ ಕಲಿತಂತೆ ಕಾಣುತ್ತಿಲ್ಲ ಎನ್ನಲಾಗಿದೆ.
ಈ ವೇಳೆ ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಕ್ಕೆ ಮತ್ತಷ್ಟು ಅಡ್ಡಿಯನ್ನುಂಟು ಮಾಡುವ ಬೆಳವಣಿಗೆಯೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿರುವ ಎಐ ವಿಡಿಯೋವೊಂದನ್ನು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್ ನಾಯಕಿ ಡಾ.ರಾಗಿಣಿ ನಾಯಕ್ ಅವರು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪ್ರಧಾನಿ ಮೋದಿ ಅವರು ಜಾಗತಿಕ ಕಾರ್ಯಕ್ರಮದಲ್ಲಿ ಚಹಾ ಮಾರುವ ಕೆಟಲ್ ಮತ್ತು ಕಪ್‌ಗಳನ್ನು ಹಿಡಿದುಕೊಂಡು ನಡೆಯುತ್ತಿರುವ ರೀತಿಯಲ್ಲಿ ತೋರಿಸಲಾದ ಎಐ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ “ಅಬ್ ಏ ಕೌನ್ ಹೈ? ಎಂದು ಕ್ಯಾಪ್ಶನ್ ನೀಡಿರುವ ಮೂಲಕ ಇದೀಗ ಮತ್ತಷ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಾ. ರಾಗಿಣಿ ನಾಯಕ್ ಅವರ ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ಕಾಂಗ್ರೆಸ್ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಾಗೂ ವೈಯಕ್ತಿಕ ದಾಳಿಗಳನ್ನು ಸಹಿಸುವುದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಾದದ ಬಳಿಕವೂ ಡಾ. ರಾಗಿಣಿ ನಾಯಕ್ ಅವರು ತಮ್ಮ ಎಕ್ಸ್ ಪೋಸ್ಟ್‌ನ್ನು ಡಿಲೀಟ್ ಮಾಡಿಲ್ಲದೇ ಇರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಆರ್. ಕೇಶವನ್, ರಾಗಿಣಿ ನಾಯಕ್ ಅವರ ಪೋಸ್ಟ್ ಕಾಂಗ್ರೆಸ್ ನಾಯಕತ್ವದ ಕೆಟ್ಟ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭ ನೆನೆಪಿಸಿರುವ ಕೇಶವನ್, ಪ್ರಧಾನಿ ಮೋದಿ ಎಐ ವಿಡಿಯೋಗೆ ಪಾಟ್ನಾ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದ್ದನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮುಂದುವರೆದು, ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯನ್ನು ನಿಂದಿಸಿದ್ದ ಕಾಂಗ್ರೆಸ್ ಈಗ ಮತ್ತೊಂದು ಎಐ ವಿಡಿಯೋ ಬಿಡುಗಡೆ ಮಾಡಿದೆ. ಭಾರತದ ಜನರು ಅವನತಿ ಹೊಂದುತ್ತಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ನಾಯಕ ಕೇಶವನ್ ಭರವಸೆ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ವಡ್ನಗರ ನಿಲ್ದಾಣದಲ್ಲಿ ತಮ್ಮ ತಂದೆ ಟೀ ಸ್ಟಾಲ್‌ನಲ್ಲಿ, ಬಾಲ್ಯದಲ್ಲಿ ಚಹಾ ಮಾರುತ್ತಿದ್ದರ ಬಗ್ಗೆ ಪ್ರಧಾನಿ ಮೋದಿ ಅವರು ಈ ಹಿಂದೆ ಹೇಳಿಕೊಂಡಿದ್ದರು.
ಈ ಹಿನ್ನಲೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಅವರನ್ನು ಚಾಯ್‌ವಾಲಾ ಎಂದು ಹೀಯಾಳಿಸುತ್ತಿದ್ದಾರೆ. ಇದೇ ವಿಚಾರವಾಗಿ 2014 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ಮೋದಿ ಬಗ್ಗೆ ಆಡಿದ ಮಾತುಗಳು, ಕಾಂಗ್ರೆಸ್ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಪ್ರಧಾನಿ ಮೋದಿ ಅವರನ್ನು ನೀಚ ಎಂದಿದ್ದ ಅಯ್ಯರ್ ಅವರಿಗೆ ತಕ್ಕ ಶಾಸ್ತಿಯಾಗಿತ್ತು ಎಂದಿದ್ದಾರೆ.



