ಮಂಗಳೂರು(ದಕ್ಷಿಣ ಕನ್ನಡ): ಸ್ಪೀಕರ್ ಯು.ಟಿ.ಖಾದರ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವ್ರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿರುವ ಬಿಜೆಪಿ ಶಾಸಕ ಭರತ್ ಶೆಟ್ಟಿಯವರು ದಾಖಲೆಯನ್ನು ಒದಗಿಸಲಿ ಎಂದು ಕಾಂಗ್ರೆಸ್ ವಕ್ತಾರ ವಿನಯರಾಜ್ ಸವಾಲ್ ಹಾಕಿದ್ದಾರೆ.
ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 4 ಜಿ ಕಾನೂನಿನ ವಿಚಾರವಾಗಿ ಮಾತನಾಡುವವರು ಕಾನೂನಿನ ವಿಚಾರ ತಿಳಿದು ಮಾತನಾಡಬೇಕು. ಇ ಪ್ರೊಕ್ಯೂರ್‌ಮೆಂಟ್‌ನಲ್ಲಿ ಅನುಮಾನ ಇದ್ದರೆ ಹಣಕಾಸು ಇಲಾಖೆ ಇದೆ. ಅಲ್ಲಿಂದ ದಾಖಲೆ ಪಡೆಯಬೇಕು. ಅದು ಬಿಟ್ಟು ದಾಖಲೆ ರಹಿತವಾಗಿ ಗಾಳಿಯಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜವಾಬ್ದಾರಿಯುತ ಶಾಸಕನಾಗಿ ಅಭಿವೃದ್ಧಿಗೆ ಏನು ಕ್ರಮ ಮಾಡಿದ್ದೀರಿ. ತಮ್ಮ ವ್ಯಾಪ್ತಿಗೆ ಬರುವ ತಣ್ಣೀರುಬಾವಿ, ಸುರತ್ಕಲ್ ಬೀಚ್ ಒಳಗೊಂಡು ಪ್ರವಾಸೋದ್ಯಮಕ್ಕೆ ಎರಡು ಅವಧಿಯಲ್ಲಿ ಏನು ಮಾಡಿದ್ದೀರಿ, ಕೈಗಾರಿಕಾ ವಲಯ ಅಭಿವೃದ್ಧಿ ಯಾವ ಕ್ರಮ ಆಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 70 ಕೋಟಿ ವೆಚ್ಚದಲ್ಲಿ ಮಂಜೂರು ಆಗಿದ್ದ ಮಾರುಕಟ್ಟೆ ಕಾಮಗಾರಿಯನ್ನು ಎರಡು ಅವಧಿಯಲ್ಲಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಿಲ್ಲ. ಕ್ಲಪ್ತ ಸಮಯದಲ್ಲಿ ವೆಚ್ಚ ಏರಿಕೆಯಾಗುತ್ತಿರಲಿಲ್ಲ. ಅದನ್ನೆಲ್ಲಾ ಮರೆಮಾಚಿ ಸ್ಪೀಕರ್ ವಿರುದ್ಧ ಮಾತನಾಡುವುದು ಸಮಂಜಸವಲ್ಲ ಎಂದವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಅಪ್ಪಿ, ರೂಪಾ ಚೇತನ್, ಚಂದ್ರಕಲಾ ಜೋಗಿ, ಅನಿಲ್ ಕುಮಾರ್, ಪ್ರಕಾಶ್ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ, ನವಾಝ್ ಮೊದಲಾದವರು ಉಪಸ್ಥಿತರಿದ್ದರು.



