ಮೈಸೂರು: ಭಾರತ ಸಂವಿಧಾನ ತಾಯಿ ಇದ್ದಂತೆ, ಪ್ರತಿಯೊಬ್ಬ ಭಾರತೀಯನಿಗೂ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿ, ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಅದು ಕಲಿಸಿಕೊಡುತ್ತದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಕುವೆಂಪುನಗರದ ತಪೋನಂದನ ಉದ್ಯಾನವನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಜಾತಿ, ಮತ, ಧರ್ಮ ಎಲ್ಲವನ್ನೂ ಬದಿಗಿಟ್ಟು ದೇಶದ ಸರ್ವರೂ ಆಚರಿಸಿ, ಸಂಭ್ರಮಿಸುವ ಹಬ್ಬವಾಗಿದೆ. ಸರ್ವ ಶ್ರೇಷ್ಠ ಭಾರತ ಸಂವಿಧಾನದಿಂದಾಗಿ ಇಂದು ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತಾಗಿದೆ. ಮತ್ತು ಇಡೀ ವಿಶ್ವಕ್ಕೆ ಭಾರತ ಸಂವಿಧಾನ ಮಾದರಿಯಾಗಿದೆ ಎಂದರು.
ಆಂದೋಲನ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ರಶ್ಮಿಕೋಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ದೇಶದ ಸಾರ್ವಭೌಮತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲ ಕೆಲಸವನ್ನೂ ಸರ್ಕಾರವೇ ಮಾಡಲಿ ಎಂದು ಭಾವಿಸಿ,ದೂಷಿಸುವುದಕ್ಕಿಂತ ಸದೃಢ ದೇಶ ಮತ್ತು ಆರೋಗ್ಯಕರ ಸಮಾಜವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕಿದೆ, ಮಾಧ್ಯಮಗಳೂ ಸಮಾಜವನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಅವಾಸ್ತವಿಕ ಮತ್ತು ಸಮಾಜಕ್ಕೆ ತಪ್ಪು ಸಂದೇಶ ತಲುಪಿಸುವ ಕೆಲಸವನ್ನು ಮಾಡದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ ಪ್ರತಿಯೊಬ್ಬ ದೇಶವಾಸಿಗಳೂ ಒಂದು ಉತ್ತಮ ಸಂಕಲ್ಪ ಮಾಡಬೇಕು. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಶ್ರೇಷ್ಠವಾದುದಾಗಿದ್ದು, ದೇಶದ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಖಾದಿ ಉದ್ಯಮವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯಕರವಾದ ಖಾದಿ ಉಡುಗೆಯನ್ನು ಧರಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಶಿವಕುಮಾರ್ ಅವರು ಮಾತನಾಡಿ, ಹಿಂದೆ ದೇಶದ ಆಡಳಿತ ನಡೆಸಿದವರು ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮುಂದುವರಿದ ಭಾಗವಾಗಿ ಇಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಸರ್ವ ರೀತಿಯಲ್ಲೂ ಸದೃಢವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಭಾರತ ವಿಶ್ವದ ಮೂರನೇ ಜಾಗತಿಕ ಶಕ್ತಿಯಾಗುವತ್ತ ಸಾಗಿರುವುದು ಪ್ರತಿಯೊಬ್ಬ ದೇಶವಾಸಿಯೂ ಸಂತಸ ಪಡುವ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.ತಪೋವ ನಂದನ ಉದ್ಯಾನವನ ಬಳಗದ ಪುರುಷೋತ್ತಮ್ ಮತ್ತು ದರ್ಶನ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಾನಸ ಗಂಗೋತ್ರಿಯ ಅತಿಥಿ ಉಪನ್ಯಾಸಕ ಡಾ.ದೇವರಾಜು ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರಂಭದ ವೇದಿಕೆಯಲ್ಲಿ ತಪೋನಂದನ ಉದ್ಯಾನವನದ ಸ್ವಚ್ಛತಾ ಸಿಬ್ಬಂದಿಗಳಾದ ಮಹದೇವಮ್ಮ, ಗೀತಮ್ಮ, ಭದ್ರತಾ ಸಿಬ್ಬಂದಿ ಕಾಂತಮ್ಮ, ಬಿಎಸ್‌ಎಫ್ ನಿವೃತ್ತ ಯೋಧ ಗುರುಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚಾರ್ಟರ್ಡ್ ಅಕೌಂಟೆಂಟ್ ಡಾ.ಅಶೋಕ್ ಕುಮಾರ್,ಉದ್ಯಮಿ ಪ್ರಕಾಶ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ನರಸಿಂಹಮೂರ್ತಿ, ನಿವೃತ್ತ ಇಂಜಿನಿಯರ್ ರಾಮಕೃಷ್ಣೇಗೌಡ, ಸಾರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತರಾದ ತಿಮ್ಮಯ್ಯ, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಸಿ.ರಾಮಣ್ಣ ಕದಲೂರು, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಬಸವರಾಜು, ಅಕ್ಕಪಕ್ಕದ ನಿವಾಸಿಗಳು, ವಾಯುವಿಹಾರಿಗಳು, ಶಾಲಾ ಮಕ್ಕಳು ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾನಸ ಗಂಗೋತ್ರಿಯ ರಾಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ.ಕೃಷ್ಣ ಹೊಂಬಾಳ್ ಅವರು ಭಾರತ ಸಂವಿಧಾನ,ಪ್ರಜಾಪ್ರಭುತ್ವ, ದೇಶದ ಸಾರ್ವಭೌಮತ್ವ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸಂವಿಧಾನದ ಆಶಯಗಳ ಕುರಿತ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.



