Tuesday, July 22, 2025
Google search engine

Homeರಾಜ್ಯಸುದ್ದಿಜಾಲಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ರೋಗಿಗಳಿಗೆ ಅನುಕೂಲ: ಶಾಸಕ ಎ.ಆರ್. ಕೃಷ್ಣಮೂರ್ತಿ

ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ರೋಗಿಗಳಿಗೆ ಅನುಕೂಲ: ಶಾಸಕ ಎ.ಆರ್. ಕೃಷ್ಣಮೂರ್ತಿ

ಯಳಂದೂರು: ಪಟ್ಟಣದಲ್ಲಿ ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದ್ದು ಇದಕ್ಕಾಗಿ ದುಬಾರಿ ವೆಚ್ಚದಲ್ಲಿ ಖಾಸಗಿ ಲ್ಯಾಬ್‌ಗಳಿಗೆ ಹಣ ನೀಡುವ ಪರಿಸ್ಥಿತಿ ತಪ್ಪಲಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ಅವರು ಸೋಮವಾರ ಪಟ್ಟಣದ ತಾಲೂಕು ಆಸ್ಪತ್ರೆಯ ನೂತನ ಲ್ಯಾಬ್‌ನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರಿ ನಿಯಮದಂತೆ ಮೆಡಿಕಲ್ ಕಾಲೇಜು ಇರುವೆಡೆ ಎರಡು ಆಸ್ಪತ್ರೆಗಳು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಎಡಬೆಟ್ಟದಲ್ಲಿ ಆಸ್ಪತ್ರೆ ಕಟ್ಟಡವಿದೆ. ನಮ್ಮ ಜಿಲ್ಲೆಯ ಕೊಳ್ಳೇಗಾಲದಲ್ಲಿ ೨೫೦ ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರಕಿದ್ದು ಈಗಾಗಲೇ ಕೊಳ್ಳೇಗಾಲದಲ್ಲಿ ೫ ಎಕರೆ ಭೂಮಿಯನ್ನು ಇದಕ್ಕೆ ಮೀಸಲಿಟ್ಟಿದೆ. ಇದು ಗುಲ್ಬರ್ಗ ಬಿಟ್ಟರೆ ಚಾಮರಾಜನಗರ ಜಿಲ್ಲೆಯಲ್ಲಿ ಈ ಯೋಜನೆಯಡಿ ನಿರ್ಮಾಣವಾಗುತ್ತಿರುವ ೨ ನೇ ಆಸ್ಪತ್ರೆಯಾಲಿದೆ.

ಯಳಂದೂರು ಪಟ್ಟಣದಲ್ಲಿ ೩೫ ಕೋಟಿ ರೂ. ವೆಚ್ಚದಲ್ಲಿ ೧೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗಿದ್ದು ಕೊಳ್ಳೇಗಾಲಕ್ಕೂ ಮುಖ್ಯಮಂತ್ರಿ ಹಾಗೂ ಆರೋಗ್ಯಮಂತ್ರಿಗಳನ್ನು ಕರೆಯಿಸಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಈಗ ನೂತನ ಲ್ಯಾಬ್ ನಿರ್ಮಾಣವಾಗಲಿದ್ದು ಇದರಲ್ಲಿ ಸಂಕ್ರಾಮಿಕ ರೋಗಳನ್ನು ಪತ್ತೆ ಮಾಡುವ ರಕ್ತ, ಕಫ, ಮಲ, ಮೂತ್ರ ಸೇರಿದಂತೆ ಇತರೆ ಪರೀಕ್ಷೆಗಳು ನಡೆಯಲಿದೆ. ಹೃದಯಸಂಬಂಧಿ ಕಾಯಿಲೆಗಳನ್ನು ಪತ್ತೆ ಮಾಡುವ ರಕ್ತ ಪರೀಕ್ಷೆಗಳು, ಬ್ಲಡ್ ಕಲ್ಚರ್, ಡೆಂಗ್ಯೂ, ಸೇರಿದಂತೆ ಇತರೆ ಜ್ವರ ಪರೀಕ್ಷೆಗಳ ರಕ್ತ ಪರೀಕ್ಷೆಗಳು ಇರಲಿದ್ದು ಇಲ್ಲಿಗೆ ಒಬ್ಬ ಪ್ಯಾಥಲಜಿಸ್ಟ್ ಹಾಗೂ ಅಗತ್ಯವಿದ್ದಲ್ಲಿ ಮೈಕ್ರೋಬಯಾಲಜಿಸ್ಟ್‌ಗಳು ಇರಲಿದ್ದು ತ್ವರಿತವಾಗಿ ರೋಗ ಪತ್ತೆ ಮಾಡಲು ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಹಕಾರವಾಗಲಿದೆ.

ಇದರೊಂದಿಗೆ ಬಡರೋಗಿಗಳ ಜೇಬಿಗೂ ಇದು ಹೊರೆಯಾಗುವುದಿಲ್ಲ, ೪೧ ಲಕ್ಷ ರೂ. ವೆಚ್ಚದಲ್ಲಿ ಈ ಲ್ಯಾಬ್ ತಲೆಎತ್ತಲಿದೆ. ಗುಣಮಟ್ಟದ ಕಾಮಗಾರಿಯನ್ನು ಸಂಬಂಧಪಟ್ಟ ಅಭಿಯಂತರರು ಹಾಗೂ ಗುತ್ತಿಗೆದಾರರು ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕರಿಗೆ ೫೦ ಕೋಟಿ ರೂ. ಸಂತಸ: ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂಬುದು ಕೇವಲ ವಿರೋಧ ಪಕ್ಷಗಳ ಸುಳ್ಳು ಆಪಾದನೆಯಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲೇ ೫೫೦ ಕೋಟಿ ರೂ.ಗಳ ಅನುದಾನದಲ್ಲಿ ಕೆಲಸಗಳು ನಡೆಯುತ್ತಿದೆ. ಈಗ ೫೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡಲು ನಮ್ಮ ಸರ್ಕಾರ ಸಿದ್ಧತೆ ನಡೆಸಿದ್ದು ಇದರಲ್ಲಿ ೩೭.೫ ಕೋಟಿ ರೂ. ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ನಗರಾಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಉಳಿದ ೧೨.೫ ಕೋಟಿ ರೂ.ಗಳನ್ನು ಶಾಸಕರ ವಿವೇಚನೆ ಬಿಡಲಾಗಿದ್ದು ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಇದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಪಟ್ಟಣದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಪಟ್ಟು ಬಿಡದೆ ಶಾಸಕರು ಅನುದಾನ ತಂದು ಕಾಮಗಾರಿ ಭರದಿಂದ ಸಾಗಿದೆ. ಇಲ್ಲಿಗೆ ಲ್ಯಾಬ್‌ಗೂ ಪ್ರತ್ಯೇಕ ಹಣ ಬಂದಿರುವುದು ಇವರ ದೂರದೃಷ್ಟಿಯ ಫಲವಾಗಿದೆ. ಇವರು ಕ್ಷೇತ್ರಕ್ಕೆ ನೀಡುವ ಕೊಡುಗೆಗಳನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮಂತಹವ ಮೇಲೆ ಇನ್ನಷ್ಟು ಹೆಚ್ಚಿದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರಂ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀಧರ್ ಮಾತನಾಡಿದರು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ನಾಮನಿರ್ದೇಶಿತ ಸದಸ್ಯ ಲಿಂಗರಾಜುಮೂರ್ತಿ, ಮುನವ್ವರ್‌ಬೇಗ್ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೈ.ಜಿ. ಶಿಲ್ಪ, ರೂಪೇಶ್, ರೇವಣ್ಣ, ಜೆಇ ಕಲ್ಯಾಣಸ್ವಾಮಿ, ಗುತ್ತಿಗೆದಾರ ವಿಕಾಸ್, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ನಂಜುಂಡಶೆಟ್ಟಿ ಸೇರಿದಂತೆ ಅನೇಕರು ಇದ್ದರು.


RELATED ARTICLES
- Advertisment -
Google search engine

Most Popular