ಧಾರವಾಡ : ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸುಮಾರು 800 ರಿಂದ 1,000 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು, ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ ಸಿರಿಧಾನ್ಯ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಎಂ. ಅವರು ಹೇಳಿದರು.
ಅವರು ಇಂದು ಡಿ.22 ಬೆಳಿಗ್ಗೆ ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ವಾಕ್‍ಥಾನ್ (ಜಾಥಾ) ಕಾರ್ಯಕ್ರಮಕ್ಕೆ ಕಲಾಭವನದ ಆವರಣದಲ್ಲಿ ಚಾಲನೆ ನೀಡಿ, ಮಾತನಾಡಿದರು. ಸಿರಿ ಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳಗಳ ಸಮೂಹ. ಇವುಗಳಿಗೆ ಸುಮಾರು 5 ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದೆ. ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗುತ್ತಿವೆ. ಅತೀ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ, ಶುಷ್ಕ, ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯಬಹುದಾಗಿದೆ. ಮತ್ತು ಇದಕ್ಕೆ ಕನಿಷ್ಠ ಕೃಷಿ ಪರಿಕರಗಳ ಬಳಕೆ ಆಗುತ್ತದೆ ಎಂದು ಅವರು ಹೇಳಿದರು.
ನಾರು, ಕಬ್ಬಿಣಾಂಶಗಳು, ಕಾರ್ಬೊಹೈಡ್ರೆಟ್‍ಗಳು ಮತ್ತು ಕೊಬ್ಬಿನಾಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಮತ್ತು ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ರೋಗ ನಿರೋದಕ ಶಕ್ತಿ ಇರುತ್ತದೆ. ಆದ್ದರಿಂದ ಇವು ಪೌಷ್ಟಿಕತೆಗಳ ಕಣಜಗಳೇ ಆಗಿವೆ. ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಠಿಕಾಂಶದ ಭದ್ರತೆಯನ್ನು ಇವು ಖಾತರಿಪಡಿಸುತ್ತವೆ ಎಂದರು. ಪೌಷ್ಟಿಕಾಂಶಗಳ ಸಿರಿಯು ಈ ಧಾನ್ಯಗಳಲ್ಲಿ ಹೆಚ್ಚಾಗಿರುವುದರಿಂದ ಸಿರಿಧಾನ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿವೆ. ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿ ಧಾನ್ಯಗಳನ್ನು ಸ್ವಾಗತಿಸುತ್ತಿದ್ದಾರೆ. ಸಿರಿಧಾನ್ಯಗಳಿಂದ ತಯಾರಿಸಲಾದ ಅಡುಗೆಯ ಜೊತೆಗೆ ಚಕ್ಕುಲಿ, ಹಪ್ಪಳ, ಕೊಡಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ ಹೀಗೆ ಹಲವು ಸಿಹಿ ಮತ್ತು ಕುರುಕಲು ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕಿರಣ್ ಕುಮಾರ ಅವರು ಹೇಳಿದರು.
ರಾಷ್ಟ್ರೀಯ ಆಹಾರ ಸುರಕ್ಷತೆ ಮಿಷನ್ ಯೋಜನೆಯಡಿ ಸಿರಿಧಾನ್ಯಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಉತ್ತೇಜಿಸಲಾಗುತ್ತಿದೆ. 2023-24 ನೇ ಸಾಲಿನಲ್ಲಿ ಜನವರಿ 5, 2024 ರಿಂದ ಜನವರಿ 07, 2024 ರ ವರೆಗೆ ಜರುಗುವ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ವಿವಿಧ ಕಾರ್ಯಕ್ರಮಗಳಾದ ಸಿರಿಧಾನ್ಯ ಹಬ್ಬ, ಅರಿವು ಮೂಡಿಸುವ ಕಾರ್ಯಕ್ರಮ, ಸಿರಿಧಾನ್ಯ ರೋಡ್ ಶೋ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮಾಹಿತಿ, ಪ್ರಗತಿಪರ ಸಿರಿಧಾನ್ಯ ಬೆಳೆಗಾರರು, ಸಂಸ್ಕರಣಾ ಘಟಕಗಳ ಉತ್ಪಾದಕರು, ಮಾರುಕಟ್ಟೆದಾರರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಿಕಟ ಸಂಪರ್ಕ ಮೂಡಿಸಲು ಅನುಕೂಲವಾಗುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಮಾತನಾಡಿ, ಸಿರಿಧಾನ್ಯ ಆಹಾರಗಳಿಗೆ ಇಂದು ಬೇಡಿಕೆ ಹೆಚ್ಚಾಗಿದ್ದು, ಆರೋಗ್ಯಕ್ಕಾಗಿ ಸಿರಿಧಾನ್ಯ ಅಡುಗೆಯನ್ನು ಬಳಸಲು ಆಸಕ್ತಿ ವಹಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಸಿರಿಧಾನ್ಯ ಮಾರಾಟಮೇಳ ಮತ್ತು ಉತ್ತಮವಾದ ಒಂದು ಕ್ಯಾಂಟಿನ್ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.
ಹುಬ್ಬಳ್ಳಿಯ ಉಪನಿರ್ದೇಶಕ ಸಂದೀಪ್ ಆರ್.ಜಿ., ಸಹಾಯಕ ನಿರ್ದೇಶಕರುಗಳಾದ ಎಸ್.ಎಫ್. ಕಟ್ಟೆಗೌಡರ್, ಸುಷ್ಮಾ ಮಳಿಮಠ, ತಿಪ್ಪೇಸ್ವಾಮಿ, ಭಾರತಿ ಮೆಣಸಿನಕಾಯಿ ಹಾಗೂ ಕೇಂದ್ರ ಕಚೇರಿಯ ಸಹಾಯಕ ನಿರ್ದೇಶಕಿ ಗೀತಾ ಕಡಪಟ್ಟಿ, ಕೃಷಿ ಇಲಾಖೆಯ ಅಧಿಕಾರಿಗಳಾದ ಮಂಜುನಾಥ ಹೂಗಾರ, ವಿಜಯಕುಮಾರ ಹಾಲಗತ್ತಿ, ಮಹಾದೇವ ಸರಶೆಟ್ಟಿ, ಸರ್ಕಾರಿ ನೌಕರ ಸಂಘದ ಆರ್.ಎಂ. ಹೊನ್ನಪ್ಪನವರ, ನಿವೃತ್ತ ನೌಕರ ಸಂಘದ ಎಸ್.ಕೆ. ರಾಮದುರ್ಗ, ಕೃಷಿ ಪರಿಕರ ಮಾರಾಟಗಾರರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕೃಷಿ ತಂತ್ರಜ್ಞಾನ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿರಿಧಾನ್ಯಗಳ ಬಳಕೆಯ ಕುರಿತು ಜನಜಾಗೃತಿಗಾಗಿ ಕಲಾಭವನದಿಂದ, ಕಾಪೆರ್Çರೇಷನ್ ವೃತ್ತ, ಸಿಬಿಟಿ, ಜುಬಿಲಿ ವೃತ್ತ ಮಾರ್ಗವಾಗಿ ಕೆಸಿಡಿ ವೃತ್ತದವರೆಗೆ ವಾಕ್‍ಥಾನ್ (ಜಾಥಾ)ವನ್ನು ಹಮ್ಮಿಕೊಳ್ಳಲಾಗಿತ್ತು.