Thursday, May 22, 2025
Google search engine

Homeರಾಜ್ಯಸುದ್ದಿಜಾಲಹಸಿ ಕಸವನ್ನು ಗೊಬ್ಬರವಾಗಿ ತಯಾರಿಸಿ ರೈತರಿಗೆ ಮಾರಾಟ ಮಾಡಿ: ಡಾ.ಕುಮಾರ

ಹಸಿ ಕಸವನ್ನು ಗೊಬ್ಬರವಾಗಿ ತಯಾರಿಸಿ ರೈತರಿಗೆ ಮಾರಾಟ ಮಾಡಿ: ಡಾ.ಕುಮಾರ

ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ಹಸಿ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿ ಗೊಬ್ಬರವನ್ನು ತಯಾರಿಸಿ ನಿಯಮಾನುಸಾರ ರೈತರಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳ ೨೦೧೬ರ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಪೀಠದ ನಿರ್ದೇಶನಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಕಸವನ್ನು ರಸಮಾಡಿ ನಗರ ಸ್ಥಳೀಯ ಸಂಸ್ಥೆಗಳು ತಯಾರಿಸಿದ ಗೊಬ್ಬರವನ್ನು ಬ್ರಾಂಡಿಂಗ್ ಮಾಡಲು ಕ್ರಮವಹಿಸಿ. ಪ್ರತಿ ತಿಂಗಳು ಮಾರಾಟ ಮಾಡಿದ ಗೊಬ್ಬರದ ಪ್ರಮಾಣ ಮತ್ತು ಅದರಿಂದ ಬರುವ ಆದಾಯದ ವರದಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿ. ತಯಾರಿಸಿದ ಗೊಬ್ಬರವನ್ನು ಅಧಿಕೃತ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ನಿಯಮಾನುಸಾರ ಮಾರಾಟ ಮಾಡಿ ಎಂದು ಸೂಚಿಸಿದರು.

ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪೌಲ್ಟ್ರಿ ತ್ಯಾಜ್ಯವನ್ನು ನಿಯೋಜಿತ ಖಾಸಗಿ ಸಂಗ್ರಹಣಾದಾರರಿಗೆ ನೀಡಿ ಅದನ್ನು ಉಪಯೋಗ ಮಾಡಿಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದರು. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ಮಾಹೆಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಯನ್ನು ಬೈಲಾದಂತೆ ಸೇವಾ ಶುಲ್ಕವನ್ನು ಸಂಗ್ರಹಿಸಿ ವರದಿ ಸಲ್ಲಿಸಿ ಎಂದು ಹೇಳಿದರು.
ಸರ್ಕಾರಿ ಹಾಗೂ ಖಾಸಗಿ ಆರ್.ಓ ಕುಡಿಯುವ ನೀರು ಶುದ್ಧೀಕರಣ ಘಟಕಗಳ ನಿಯಮಿತವಾಗಿ ನೀರಿನ ಗುಣಮಟ್ಟವನ್ನು ನಿಗಧಿತ ೧೨ ಮಾನದಂಡಗಳ ಪ್ರಕಾರ ಪರೀಕ್ಷೆ ಮಾಡಿಸಿ. ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆ ಅಡಿ ಪ್ರತಿ ವಾರಕ್ಕೊಮ್ಮೆ ಕಚ್ಚಾ ನೀರು ಮತ್ತು ಶುದ್ಧೀಕರಣ ಘಟಕದ ಶುದ್ಧ ನೀರಿನ ಮಾದರಿಯನ್ನು ಪರೀಕ್ಷಿಸಿ. ಸಾರ್ವಜನಿಕ ಶೌಚಾಲಯಗಳು ಉಪಯೋಗಕ್ಕೆ ಯೋಗ್ಯವಾಗಿದೆಯೇ ಎಂದು ಪರಿಶೀಲಿಸಿ ಎಂದು ತಿಳಿಸಿದರು.

ಘನತ್ಯಾಜ್ಯ ವಸ್ತು ನಿರ್ವಹಣೆಯ ಯಂತ್ರೋಪಕರಣ ಅಳವಡಿಕೆ ಹಾಗೂ ನಿರ್ವಹಣೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು. ಸಭೆಯಲ್ಲಿ ನ್ಯಾಯಾಧೀಶರಾದ ವಾಣಿ ಎ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಶೇಖ್ ತನ್ವೀರ ಆಸಿಫ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ನಗರಸಭೆ ಆಯುಕ್ತ ಮಂಜುನಾಥ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular