ಮೈಸೂರು : ಪರಿಸರವಾದಿಗಳು ಹಾಗೂ ಮೈಸೂರು ರಾಜವಂಶಸ್ಥರ ತೀವ್ರ ವಿರೋಧದ ನಡುವೆ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಈ ಹಿನ್ನಲೆಯಲ್ಲಿ ಪ್ರಮುಖ ಕಾಮಗಾರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾಮಗಾರಿಗಳನ್ನು ತಕ್ಷಣದಿಂದಲೆ ಸ್ಥಗಿತಗೊಳಿಸುವಂತೆ ಆದೇಶಿಸಿದೆ.
ಈ ಮೂಲಕ ಚಾಮುಂಡಿ ಬೆಟ್ಟದ ಪರಿಸರ ರಕ್ಷಣೆಗೆ ಆಗ್ರಹಿಸಿ ನಡೆದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದ್ದು, 2025ರ ಡಿಸೆಂಬರ್ನಲ್ಲಿ ಚಾಮುಂಡಿ ಬೆಟ್ಟ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಸಾದ ಯೋಜನೆಗೆ ಚಾಲನೆ ನೀಡಲಾಗಿತ್ತು.
ಈ ಯೋಜನೆಯಡಿ ದೇವಸ್ಥಾನದ ಆವರಣದಲ್ಲಿ ಮಲ್ಟಿಪರ್ಪಸ್ ಏರಿಯಾ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಿದ್ದರು, ಈ ಕಾಮಗಾರಿ ಜವಾಬ್ದಾರಿಯನ್ನು ಬೆಂಗಳೂರಿನ ಕಾರ್ಕಳ ಎಂಟರ್ಪ್ರೈಸಸ್ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಕಾಮಗಾರಿಗಳು ಆರಂಭವಾಗುತ್ತಿದ್ದಂತೆ, ಬೆಟ್ಟದ ನೈಸರ್ಗಿಕ ಸ್ವರೂಪಕ್ಕೆ ಹಾನಿಯಾಗಲಿದೆ ಎಂಬ ಆರೋಪಗಳು ಕೇಳಿಬಂದವು. ಆದ್ದರಿಂದ ಈ ಕಾಮಗಾರಿಯನ್ನು ನಿಲ್ಲಿಸಲು ಪರಿಸರ ಸಂಘಟನೆಗಳು, ಪರಿಸರ ಪ್ರೇಮಿಗಳು ಹಾಗೂ ಹೋರಾಟಗಾರರು ನಿರಂತರ ಪ್ರತಿಭಟನೆ ನಡೆಸಿದರು.
ಇನ್ನೂ ಈ ಕಾಮಗಾರಿಗೆ ಮೈಸೂರು ರಾಜವಂಶಸ್ಥರೂ ಸಹ ವಿರೋಧ ವ್ಯಕ್ತಪಡಿಸಿದ್ದರು, ವಿಷಯವು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಗಳು ಸತತ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಮುಂದುವರಿದ ಬಳಿಕ, ಈ ಕುರಿತು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ನ್ಯಾಯಾಲಯವು, ಸದ್ಯ ನಡೆಯುತ್ತಿರುವ ಒಂದು ಕಾಮಗಾರಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.
ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪುರುಷೋತ್ತಮ್ ಅವರು ಮಾಹಿತಿ ನೀಡಿದ್ದು, ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದಲ್ಲಿ ಸುಮಾರು ₹46 ಕೋಟಿ ಅನುದಾನದಲ್ಲಿ ಮಲ್ಟಿಪರ್ಪಸ್ ಏರಿಯಾ ಅಭಿವೃದ್ಧಿ, ಅಮೆನಿಟೀಸ್ ಬ್ಲಾಕ್, ಪ್ರವೇಶ ದ್ವಾರ ನಿರ್ಮಾಣ, ಕ್ಯೂ ಮಂಟಪ, ವ್ಯೂ ಪಾಯಿಂಟ್ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿತ್ತು. ಆದರೆ ಅವುಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಜಾರಿಗೊಳಿಸಲಾಗಿದೆ ಎಂಬ ಆರೋಪಗಳು ಈ ಯೋಜನೆಯ ವಿರೋಧಕ್ಕೆ ಕಾರಣವಾಗಿವೆ ಎನ್ನಲಾಗಿದೆ.



