ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೊಸ ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದೆ. ಇದರ ಭಾಗವಾಗಿ, ವಿದೇಶದಿಂದ ಬರುವವರ ಮೇಲೆ ನಿಗಾ ಇಡಲು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಟೆಸ್ಟಿಂಗ್ ಮತ್ತು ಆರ್‌ಟಿಪಿಸಿಆರ್ ಲ್ಯಾಬ್‌ಗಳನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗಿದೆ. ದೇವನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಆರ್‌ಟಿಪಿಸಿಆರ್ ಪ್ರಯೋಗಾಲಯವನ್ನು ಸಿದ್ಧಗೊಳಿಸಲಾಗುತ್ತಿದೆ.
ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರಿನ ನಾಲ್ಕು ತಾಲ್ಲೂಕುಗಳಲ್ಲಿಯೂ ಮಾದರಿ ಸಂಗ್ರಹ ಮತ್ತು ಪರೀಕ್ಷೆಗಾಗಿ ಆರ್‌ಟಿಪಿಸಿಆರ್ ಲ್ಯಾಬ್‌ಗಳನ್ನು ಪುನರಾರಂಭಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಕೃಷ್ಣಾರೆಡ್ಡಿ ಅವರು ಈ ಲ್ಯಾಬ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಸ್ತುತ, ಜಿಲ್ಲೆಯಲ್ಲಿ ಎರಡು ಸಕ್ರಿಯ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಒಬ್ಬರು ಪೈಲಟ್ ಆಗಿದ್ದಾರೆ. ಕೋವಿಡ್ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇಡಲು ಮತ್ತು ಮಾದರಿ ಸಂಗ್ರಹ ಮಾಡುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ವಿಶೇಷವಾಗಿ, ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದ್ದು, ಕೋವಿಡ್ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ರಾಜ್ಯದಲ್ಲಿ ಮಂಗಳವಾರ (ಮೇ 27) ಅಂತ್ಯಕ್ಕೆ 73 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರ ಸಲಹೆ ನೀಡಿದೆ.