ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಜೆಎನ್-೧ ಉಪತಳಿ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಜನವರಿ ೩ ರಿಂದ ೬೦ ವರ್ಷ ಮೇಲ್ಪಟ್ಟವರು ಹಾಗೂ ದೀರ್ಘವ್ಯಾಧಿ (ಕೊಮೊರ್ಬಿಡಿಟಿ) ಬಳಲುತ್ತಿರುವವರು ಜಿಲ್ಲಾ ಆಸ್ವತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಆದಾಗ್ಯೂ, ಜನರು ಭಯಪಡುವ ಅಗತ್ಯವಿಲ್ಲ, ವೈರಸ್ ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ತಿಳಿಸಿದರು. ಕೋವಿಡ್-೧೯ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥರು ಮತ್ತು ಅದರ ಸದಸ್ಯರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಪಾಟೀಲ್, ಸದ್ಯದ ಪರಿಸ್ಥಿತಿ ಮತ್ತು ರಾಜ್ಯದಲ್ಲಿ ಕೋವಿಡ್-೧೯ ನಿಭಾಯಿಸಲು ಕೈಗೊಳ್ಳಲಾಗಿರುವ ಸಿದ್ಧತೆಯನ್ನು ಪರಾಮರ್ಶಿಸಿದರು.
ಸಭೆಯ ನಂತರ ಮಾತನಾಡಿದ ಸಚಿವರು, ಹೊಸ ಲಸಿಕೆಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದಿಷ್ಟ ನಿರ್ದೇಶನ ಬಂದಿಲ್ಲ. ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೇ ಅಲೆ ವೇಳೆ ನೀಡಲಾದ ಲಸಿಕೆಗಳನ್ನೇ ನೀಡುತ್ತೇವೆ ಮತ್ತು ೬೦ ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು ಕೊಮೊರ್ಬಿಡಿಟಿ ಇರುವವರು ಬುಧವಾರದಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಪಡೆಯಬಹುದು ಎಂದು ಹೇಳಿದರು.