ಬಳ್ಳಾರಿ: ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸ್ವಚ್ಛ ಭಾರತ್ ಯೋಜನೆಯ ಉದ್ದೇಶಗಳನ್ನು ಯಶಸ್ವಿಗೊಳಿಸಲು ತಮ್ಮೆಲ್ಲರ ಪಾತ್ರ ಅತೀ ಮುಖ್ಯವಾಗಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ್ ಅವರು ಹೇಳಿದರು.
ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ರ ಸಾಮರ್ಥ್ಯ ಅಭಿವೃದ್ದಿ ಘಟಕದಡಿ ಸಮಗ್ರ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಕುರಿತು ನಗರದ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯಕರ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸಲು ತ್ಯಾಜ್ಯ ನಿರ್ವಹಣೆಯು ಅತ್ಯಗತ್ಯವಾಗಿದೆ. ತರಬೇತಿಯನ್ನು ಪಡೆದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಮತ್ತು ಕಮ್ಯುನಿಟಿ ಮೊಬೆಲೈಜರ್ ಗಳು ತಮ್ಮ –ತಮ್ಮ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕ್ರಿಯಾಶೀಲರಾಗಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸ್ವಚ್ಛ ನಗರ, ಪಟ್ಟಣಗಳನ್ನಾಗಿ ಮಾರ್ಪಾಡಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಅಬ್ದುಲ್ ರೆಹಮಾನ್ ಮಾತನಾಡಿ, ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಕಮ್ಯುನಿಟಿ ಮೊಬೆಲೈಜರ್ ಗಳು ಸೂಕ್ತ ಸಲಹೆ-ಸೂಚನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಗರ, ಪಟ್ಟಣ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಅಭಿವೃದ್ದಿಗೆ ಆದ್ಯತೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಮುಖ್ಯ ಪರಿಸರ ಅಧಿಕಾರಿ ರಮೇಶ್.ಬಿ.ಎನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಕಸದ ಉತ್ಪಾದನೆಯನ್ನು ಕಡಿಮೆ ಮಾಡಲು, ಮರುಬಳಕೆ ಮತ್ತು ಅದನ್ನು ಗರಿಷ್ಠಗೊಳಿಸಲು ಹಾಗೂ ಪರಿಸರದ ಮೇಲಿನ ತ್ಯಾಜ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಮಗ್ರ ತ್ಯಾಜ್ಯ ನಿರ್ವಹಣೆಯು ವಿಶಾಲವಾದ ಕಾರ್ಯಚಟುವಟಿಕೆಯಾಗಿದೆ ಎಂದು ತಿಳಿಸಿದರು.
ಸಮುದಾಯಗಳಲ್ಲಿ ಉತ್ಪಾದನೆಯಾಗುವ ಕಸ, ಕಸದ ಸಂಗ್ರಹ, ಸಾಗಣೆ, ವಿಂಗಡಣೆ, ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಸೂಕ್ತವಾಗಿ ಅರಿತುಕೊಳ್ಳಬೇಕು. ಆರೋಗ್ಯಕರ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸಲು ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ ಎಂದರು.
ಸ್ವಚ್ಛತಾ ಕಾರ್ಯದ ಬಗೆ ಮನೆ-ಮನೆ ಕಸ ವಿಂಗಡಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಲು ಸಿಬ್ಬಂದಿಯವರಿಗೆ ಹ್ಯಾಂಡ್ ಮೈಕ್ ಗಳನ್ನು ವಿತರಿಸಬೇಕು ಎಂದರಲ್ಲದೇ, ಬಳಕೆಯ ಕುರಿತು ಮಾರ್ಗಸೂಚಿ ನೀಡಿದರು.
ಪೌರಕಾರ್ಮಿಕರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಸಾಧನಗಳ ಬಳಕೆ ಹಾಗೂ ನಿರ್ವಹಣೆಗಳ ಕುರಿತು ಹಾಗೂ ಪ್ರಥಮ ಚಿಕಿತ್ಸೆಯ ಕಿಟ್ ಬಳಕೆಯ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಪ್ರಕೃತಿ ಫೌಂಡೇಷನ್, ಬೆಂಗಳೂರು ಮತ್ತು ಲೆಟ್ ಬಿ ದ ಚೇಂಜ್ ಸಂಸ್ಥೆಯ ಪದಾಧಿಕಾರಿಗಳು, ಮೂಲ ಘನ ತ್ಯಾಜ್ಯ ನಿರ್ವಹಣೆ ಹಾಗೂ ಮೂಲ ವಿಂಗಡಣೆ ಮತ್ತು ಮನೆಯಲ್ಲಿಯೇ ಗೊಬ್ಬರ ತಯಾರಿಕೆಯ ಕುರಿತು ನೇರ ಸಂದರ್ಶನದ ಮೂಲಕ ತರಬೇತಿ ನೀಡಲಾಯಿತು.
ಸ್ವಚ್ಛ ಸರ್ವೇಕ್ಷಣೆ -2025 ರನ್ವಯ ಜಿಲ್ಲೆಯ ಫಲಿತಾಂಶ ಹಾಗೂ ಶ್ರೇಣಿಯ ಕುರಿತು ಪರಿಶೀಲನೆ ಮಾಡಿ, ಆಯಾ ಹಂತ, ಘಟಕದಲ್ಲಿ ಕಂಡುಬAದ ಲೋಪ-ದೋಷಗಳ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಕುರಿತು ವಿಶ್ಲೇಷಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಮತ್ತು ಕಮ್ಯುನಿಟಿ ಮೊಬೆಲೈಜರ್ ಗಳು ಹಾಗೂ ಇತರೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.