ಮೈಸೂರು: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯು ಗ್ರಾಮ ಮಟ್ಟದಿಂದ ನಡೆಯಬೇಕು. ಮಕ್ಕಳ ಗ್ರಾಮ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿಗಳು ಆರ್. ಐಶ್ವರ್ಯ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಹಾಗೂ ಕಾರ್ಯಪಡೆ ಸಮಿತಿಯ ಸಭೆ ನಡೆಸಿ ಮಾತನಾಡಿದರು. ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪ್ರತಿ ಮಾಹೆ ನಿಗದಿಪಡಿಸಿರುವ ಕನಿಷ್ಠ 15 ತಪಾಸಣೆ ಅಥವಾ ದಾಳಿಗಳನ್ನು ನಡೆಸಿ ವರದಿ ನೀಡಬೇಕು ಎಂದರು.
ಏಪ್ರಿಲ್ 2026 ರಿಂದ ಜೂನ್ 2026 ರವರೆಗೆ ಕಾರ್ಮಿಕ ಅಧಿಕಾರಿಗಳು 434 ದಾಳಿಗಳನ್ನು ನಡೆಸಿ 14 ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಿ 12 ಜನ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಿ, 20000 ದಂಡ ವಸೂಲಿ ಮಾಡಲಾಗಿದೆ ಎಂದರು.
ದಾಳಿ ಅಥವಾ ತಪಾಸಣೆ ವೇಳೆ ಪತ್ತೆಯಾಗುವ ಬಾಲ ಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿದ ನಂತರ ಅವರ ಅರ್ಹತೆಯ ಅನುಗುಣವಾಗಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಥವಾ ಸರ್ಕಾರಿ ಸೌಮ್ಯದಲ್ಲಿರುವ ವಸತಿಶಾಲೆಗಳಿಗೆ ದಾಖಲಿಸಿ, ರಕ್ಷಣೆಯ ಜೊತೆಗೆ ಪುನರ್ವಸತಿ ಯು ಸಹ ಅತಿಮುಖ್ಯ ಎಂದರು.
ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತೆ ಲಲಿತಾ ಬಾಯಿ, ಕಾರ್ಮಿಕ ಅಧಿಕಾರಿ ಚೇತನ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರವಿಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್. ಹೆಚ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.



