ತುಮಕೂರು : ನಿವೃತ್ತ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ಬಳಸಿಕೊಂಡು ಸುಮಾರು 4.24 ಕೋಟಿ ರೂ. ಲೂಟಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ಎಂಬಾಕೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್ ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ನಂತರ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ನೇತೃತ್ವದಲ್ಲಿ ನಡೆದ ಸಮಗ್ರ ಪರಿಶೀಲನೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರನ್ನು ಬಳಸಿಕೊಂಡು ಅಕ್ರಮ ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕಳೆದ 5 ವರ್ಷಗಳಲ್ಲಿ 29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳಲ್ಲಿ ಸುಮಾರು 4.24 ಕೋಟಿ ರೂಪಾಯಿಯನ್ನ ಸೌಮ್ಯ ಮತ್ತು ಆಕೆಯ ಕುಟುಂಬದ ಐದು ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



