ಮಂಗಳೂರು (ದಕ್ಷಿಣ ಕನ್ನಡ): ಪವಿತ್ರ ಹಜ್ ಯಾತ್ರೆಗೆ ಹೊರಡಲಿರುವ ಸ್ಪೀಕರ್ ಯು.ಟಿ.ಖಾದರ್ ಅವರನ್ನು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಸೋಮವಾರ ಮಂಗಳೂರು ನಗರದ ಖಾಸಗಿ ಹೊಟೇಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು. ಈ ಸಂದರ್ಭ ಸ್ಪೀಕರ್ ಯು.ಟಿ.ಖಾದರ್ ತನ್ನ ತಂದೆ ಮಾಜಿ ಶಾಸಕ ಯು.ಟಿ.ಫರೀದ್ ಅವರನ್ನು ನೆನೆದು ಭಾವುಕರಾದರು.
ಉಳ್ಳಾಲದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರೆಂದೂ ಕೂಡ ಹೊರ ರಾಜ್ಯ, ವಿದೇಶವನ್ನು ಸುತ್ತಾಡಿದವರಲ್ಲ. ಕ್ಷೇತ್ರದ ಜನತೆಗಾಗಿ ಹೆಚ್ಚಿನ ಸಮಯ ಮೀಸಲಿಟ್ಟಿದ್ದರು. ಪವಿತ್ರ ಹಜ್ ಯಾತ್ರೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರೂ ಕೂಡ ಕೊನೆಯ ಘಳಿಗೆಯಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದ ಕಾರಣ ಅದೂ ಈಡೇರಲಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.